ADVERTISEMENT

80ನೇ ವಯಸ್ಸಿನಲ್ಲಿ 20ನೇ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ ಪಂಜಾಬ್‌ನ ವೃದ್ಧ

ಪಿಟಿಐ
Published 3 ಫೆಬ್ರುವರಿ 2022, 14:24 IST
Last Updated 3 ಫೆಬ್ರುವರಿ 2022, 14:24 IST
   

ಚಂಡೀಗಡ: ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ 80 ವರ್ಷ ವಯಸ್ಸಿನ ಚಮ್ಮಾರರೊಬ್ಬರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಫೆಬ್ರುವರಿ 20ರಂದು ಚುನಾವಣೆ ನಡೆಯಲಿದ್ದು, ಅವರು ತಮ್ಮ 20 ನೇ ಚುನಾವಣೆಯಲ್ಲಿ ಹೋರಾಡಲಿದ್ದಾರೆ.

80ರ ಇಳಿ ವಯಸ್ಸು ಅಥವಾ ಆರ್ಥಿಕ ಸಮಸ್ಯೆಗಳು ಓಂ ಪ್ರಕಾಶ್ ಜಖು ಅವರ ಚುನಾವಣೆಯಲ್ಲಿ ಸ್ಪರ್ಧಿಸುವ ಹುಮ್ಮಸ್ಸಿಗೆ ಅಡ್ಡಿಯಾಗಿಲ್ಲ.

ಹೋಶಿಯಾರ್‌ಪುರ್ ಕ್ಲಾಕ್ ಟವರ್‌ನ ಸಮೀಪವಿರುವ ಒಂದು ಸಣ್ಣ ಅಂಗಡಿಯಲ್ಲಿ ಜೀವನೋಪಾಯಕ್ಕಾಗಿ ಶೂಗಳ ರಿಪೇರಿ ಮತ್ತು ಸ್ವಚ್ಛಗೊಳಿಸುವ ಕೆಲಸ ಮಾಡುವ ಓಂ ಪ್ರಕಾಶ್ ಜಖು, ತನ್ನ ಉತ್ಸಾಹ ತನ್ನನ್ನು ಮುಂದುವರಿಸಿಕೊಂಡು ಹೋಗುತ್ತಿದೆ ಎಂದು ಹೇಳುತ್ತಾರೆ. ಅವರು ಭಾರತರಾಷ್ಟ ಡೆಮಾಕ್ರಟಿಕ್ ಪಾರ್ಟಿಯಿಂದ ಹೋಶಿಯಾರ್‌ಪುರದಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ.

ADVERTISEMENT

‘ನನ್ನ ಅರ್ಧದಷ್ಟು ಜೀವನದಲ್ಲಿ ನಾನು ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಎಲ್ಲವೂ ವಿಧಾನಸಭೆ ಚುನಾವಣೆಗಳೆ’ಎಂದು ಜಖು ಹೇಳುತ್ತಾರೆ.

ಈ ಕ್ಷೇತ್ರದಿಂದ ಕಣದಲ್ಲಿರುವ ಇತರ ಅಭ್ಯರ್ಥಿಗಳಲ್ಲಿ ಕಾಂಗ್ರೆಸ್‌ನ ಹಾಲಿ ಶಾಸಕ ಸುಂದರ್ ಶಾಮ್ ಅರೋರಾ, ಬಿಜೆಪಿಯ ತಿಕ್ಷನ್ ಸುದ್ ಮತ್ತು ಎಎಪಿಯ ಬ್ರಮ್ ಶಂಕರ್ ಸೇರಿದ್ದಾರೆ.

ಜಖು ಅವರ ಸಂಪಾದನೆ ಅವರು ಮತ್ತು ಕುಟುಂಬದ ಜೀವನಕ್ಕೆ ಸಾಕಾಗುತ್ತದೆ. ಅವರ ಕನಿಷ್ಠ ದುಡಿಮೆಯು ಅವರನ್ನು ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಅಡ್ಡಿಯಾಗಿಲ್ಲ.

ಅವರ ಪತ್ನಿ ಭಜನ್ ಕೌರ್ (75) ಮತ್ತು ಅವರ ಮಕ್ಕಳು ಚುನಾವಣೆಯಲ್ಲಿ ಸ್ಪರ್ಧಿಸುವ ಅವರ ನಿರ್ಧಾರವನ್ನು ಬೆಂಬಲಿಸುತ್ತಾರೆ ಎಂದು ಜಖು ಹೇಳುತ್ತಾರೆ.

ತುರ್ತು ಪರಿಸ್ಥಿತಿಯ ಸಮಯದಲ್ಲಿ ಜೈಲಿಗೆ ಹೋಗಿದ್ದೆ. ಬಿಎಸ್‌ಪಿ ಸಂಸ್ಥಾಪಕ ಕಾನ್ಶಿ ರಾಮ್ ಅವರಿಗೆ ‘ಬಹಳ ಆಪ್ತನಾಗಿದ್ದೆ’ಎಂದು ಹೇಳಿಕೊಳ್ಳುತ್ತಾರೆ.

ಚುನಾವಣೆಯಲ್ಲಿ ಜಯಶಾಲಿಯಾದರೆ 18 ವರ್ಷದವರೆಗೆ ಎಲ್ಲರಿಗೂ ಉಚಿತ ಶಿಕ್ಷಣ, ಉತ್ತಮ ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯಗಳಿಗಾಗಿ ಕೆಲಸ ಮಾಡುವುದಾಗಿ ಹೇಳುತ್ತಾರೆ.

ಡ್ರಗ್ಸ್‌ನಿಂದ ಯುವಕರನ್ನು ಪಾರು ಮಾಡಬೇಕಿದೆ ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.