ADVERTISEMENT

ಮಹಾರಾಷ್ಟ್ರ: ಅಷ್ಟಕ್ಕೂ ಬಿಜೆಪಿ ಏಕನಾಥ ಶಿಂಧೆಗೆ ಮಹಾ ಸಿಎಂ ಪಟ್ಟ ಕಟ್ಟಿದ್ದು ಏಕೆ?

ಅಚ್ಚರಿಯ ನಿರ್ಧಾರ ಪ್ರಕಟಿಸಿದ ಬಿಜೆಪಿ: ಫಡಣವೀಸ್‌ ಉಪಮುಖ್ಯಮಂತ್ರಿ

ಪಿಟಿಐ
Published 1 ಜುಲೈ 2022, 2:14 IST
Last Updated 1 ಜುಲೈ 2022, 2:14 IST
ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರಿಗೆ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಹಸ್ತಲಾಘವ ನೀಡಿದರು. ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಇದ್ದಾರೆ –ಪಿಟಿಐ ಚಿತ್ರ
ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರಿಗೆ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಹಸ್ತಲಾಘವ ನೀಡಿದರು. ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಇದ್ದಾರೆ –ಪಿಟಿಐ ಚಿತ್ರ   

ನವದೆಹಲಿ: ಲೋಕಸಭೆಗೆ 2024ರಲ್ಲಿ ನಡೆಯಲಿರುವ ಚುನಾವಣೆಯನ್ನು ಗಮನದಲ್ಲಿ ಇರಿಸಿಕೊಂಡೇ ಏಕನಾಥ ಶಿಂಧೆ ಅವರಿಗೆ ಮುಖ್ಯಮಂತ್ರಿ ಹುದ್ದೆ ನೀಡಲು ಬಿಜೆಪಿ ನಿರ್ಧರಿಸಿದೆ. ಹಿಂದುತ್ವ ಮತ್ತು ಪ್ರಾದೇಶಿಕ ಭಾವನೆಗಳನ್ನು ಮುಂದಕ್ಕೆ ತರುವುದು ಇದರ ಹಿಂದಿನ ತಂತ್ರ. ಈವರೆಗೆ ಈ ಎರಡೂ ಅಂಶಗಳನ್ನುಬಿಜೆಪಿಯ ಮಾಜಿ ಮಿತ್ರಪಕ್ಷ ಶಿವಸೇನಾ ಬಲವಾಗಿ ನೆಚ್ಚಿಕೊಂಡಿತ್ತು.

ಒಂದು ಕಾಲದಲ್ಲಿ ಮಹಾರಾಷ್ಟ್ರದಲ್ಲಿ ಹಿಂದುತ್ವವಾದಿ ಪಕ್ಷವೆಂದರೆ ಶಿವಸೇನಾವೇ ಆಗಿತ್ತು. ಆದರೆ, ಈಗ ಸ್ಥಾನವನ್ನು ಬಿಜೆಪಿ ಆಕ್ರಮಿಸಿಕೊಳ್ಳಲು ಯತ್ನಿಸುತ್ತಿದೆ. ಅದಕ್ಕೆ ಶಿಂಧೆ ನೆರವಾಗಬಹುದು ಎಂಬ ಲೆಕ್ಕಾಚಾರ ಬಿಜೆಪಿಯಲ್ಲಿ ಇದೆ.

ಶಿಂಧೆಯನ್ನು ಮುಖ್ಯಮಂತ್ರಿ ಮಾಡುವ ನಿರ್ಧಾರವು ಶಿವಸೇನಾವನ್ನು ದುರ್ಬಲಗೊಳಿಸಬಹುದು ಮತ್ತು ಅದರ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರನ್ನು ರಾಜಕೀಯವಾಗಿ ಅಪ್ರಸ್ತತವಾಗಿಸಬಹುದು.

ADVERTISEMENT

ಶಿವಸೈನಿಕರಲ್ಲಿ ಒಬ್ಬರು ಮುಖ್ಯಮಂತ್ರಿ ಹುದ್ದೆಯಲ್ಲಿದ್ದಾರೆ ಎಂಬ ಅಂಶವು ಈಗ ಕವಲು ದಾರಿಯಲ್ಲಿರುವ ಶಿವಸೈನಿಕರನ್ನು ಶಿಂಧೆ ಅವರತ್ತ ಆಕರ್ಷಿಸಬಹದು. ಮಹಾರಾಷ್ಟ್ರದ ಅತ್ಯಂತ ಪ್ರಬಲ ಸಮುದಾಯವಾದ ಮರಾಠರು ಎನ್‌ಸಿಪಿ ಮತ್ತು ಶಿವಸೇನಾ ಬೆಂಬಲಿಗರಾಗಿದ್ದಾರೆ. ಶಿಂಧೆ ಅವರು ಮುನ್ನೆಲೆಯಲ್ಲಿ ಇದ್ದರೆ, ಈ ಸಮುದಾಯವನ್ನು ಬಿಜೆಪಿಯತ್ತ ತರಬಹುದು ಎಂಬ ಲೆಕ್ಕಾಚಾರವೂ ಬಿಜೆಪಿಯಲ್ಲಿ ಇದೆ.

ಬಂಡಾಯ ಎದ್ದ ಶಿವಸೇನಾದ ಶಾಸಕರಲ್ಲಿ ಒಬ್ಬರು ಮುಖ್ಯಮಂತ್ರಿ ಆಗಲಿದ್ದಾರೆಯೇ ಎಂದು ಉದ್ಧವ್ ಠಾಕ್ರೆ ಅವರು ಈ ಹಿಂದೆ ಪ್ರಶ್ನಿಸಿದ್ದರು. ಹಾಗಿದ್ದರೆ ಮುಖ್ಯಮಂತ್ರಿ ಹುದ್ದೆ ಬಿಡಲು ಸಿದ್ಧ ಎಂದಿದ್ದರು. ಈಗ, ಈ ವಿಚಾರವನ್ನು ಉದ್ಧವ್‌ ಅವರು ಮುನ್ನೆಲೆಗೆ ತರುವುದನ್ನು ಬಿಜೆಪಿ ತಡೆದಿದೆ.

ಶಿಂಧೆಮಹಾರಾಷ್ಟ್ರ ಸಿಎಂ
ಮುಂಬೈ
: ಶಿವಸೇನಾದ ನಾಯಕ ಏಕನಾಥ ಶಿಂಧೆ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಗುರುವಾರ ರಾತ್ರಿ 7.30ರ ಹೊತ್ತಿಗೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ಸರ್ಕಾರದಲ್ಲಿ ಭಾಗಿಯಾಗುವುದಿಲ್ಲ ಎಂದು ಮುಂಚೆ ಹೇಳಿದ್ದ ಮಾಜಿ ಮುಖ್ಯಮಂತ್ರಿ, ಬಿಜೆಪಿಯ ದೇವೇಂದ್ರ ಫಡಣವೀಸ್‌ ಅವರು ಉಪ ಮುಖ್ಯಮಂತ್ರಿಯಾಗಿದ್ದಾರೆ. ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ರಾಜಭವನದಲ್ಲಿ ಪ್ರಮಾಣವಚನ ಬೋಧಿಸಿದರು.

ಶಿವಸೇನಾ ಸ್ಥಾಪಕ ಬಾಳಾ ಠಾಕ್ರೆ ಮತ್ತು ತಮ್ಮ ಮಾರ್ಗದರ್ಶಕರಾಗಿದ್ದ ಆನಂದ್‌ ದಿಘೆ ಅವರಿಗೆ ನಮನ ಸಲ್ಲಿಸಿದ ಬಳಿಕ ಶಿಂಧೆ ಪ್ರಮಾಣ ವಚನ ಸ್ವೀಕರಿಸಿದರು. ಬಾಳಾ ಠಾಕ್ರೆ ಮತ್ತು ದಿಘೆ ಅವರ ಕುರಿತ ಘೋಷಣೆಗಳನ್ನು ಶಿಂಧೆ ಹಿಂಬಾಲಕರು ಕೂಗಿದರು.

ಶಿಂಧೆ ಅವರು ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಗುರುವಾರ ಸಂಜೆ ಫಡಣವೀಸ್‌ ಘೋಷಿಸಿದ್ದರು. ಇದು ಅಚ್ಚರಿಗೆ ಕಾರಣವಾಗಿತ್ತು. ಫಡಣವೀಸ್‌ ಅವರೇ ಮುಖ್ಯಮಂತ್ರಿ ಆಗಲಿದ್ದಾರೆ, ಶಿಂಧೆ ಉಪಮುಖ್ಯಮಂತ್ರಿಆಗಲಿದ್ದಾರೆ ಎಂಬ ಭಾವನೆಯೇ ವ್ಯಾಪಕವಾಗಿ ಇತ್ತು. ಸರ್ಕಾರದಲ್ಲಿ ಫಡಣವೀಸ್‌ ಇರುವುದಿಲ್ಲ ಎಂಬುದು ಅಚ್ಚರಿ ಮೂಡಿಸಿತ್ತು. ಬಳಿಕ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಟ್ವೀಟ್‌ ಮಾಡಿ ‘ಫಡಣವೀಸ್‌ ಸರ್ಕಾರವನ್ನು ಸೇರಲಿದ್ದಾರೆ’ ಎಂದಿದ್ದರು.

‘ರಾಜ್ಯದ ಅಭಿವೃದ್ಧಿಯೇ ನನ್ನ ಆದ್ಯತೆ. ಸಮಾಜದ ಎಲ್ಲ ವರ್ಗಗಳನ್ನು ಜತೆಗೆ ಕರೆದೊಯ್ಯುತ್ತೇನೆ’ ಎಂದು ಪ್ರಮಾಣವಚನದ ಬಳಿಕ ಏಕನಾಥ ಶಿಂಧೆ ಅವರು ಹೇಳಿದ್ದಾರೆ.

ಶಿವಸೇನಾದ ಹಲವು ಶಾಸಕರು ಶಿಂಧೆ ನೇತೃತ್ವದಲ್ಲಿ ಮೊದಲು ಸೂರತ್‌ಗೆ ನಂತರ ಗುವಾಹಟಿಗೆ ಹೋಗಿ ಉದ್ಧವ್‌ ವಿರುದ್ಧ ಬಂಡಾಯ ಎದ್ದಿದ್ದರು. ದಿನಕಳೆದಂತೆ ಶಿಂಧೆ ಪಾಳಯ ಸೇರಿದ ಶಾಸಕರ ಸಂಖ್ಯೆ ಹೆಚ್ಚುತ್ತಲೇ ಹೋಯಿತು. ಶಿವಸೇನಾದ 39 ಶಾಸಕರು ಸೇರಿ 50 ಶಾಸಕರ ಬೆಂಬಲ ಶಿಂಧೆ ಅವರಿಗೆ ಇದೆ ಎನ್ನಲಾಗಿದೆ. ಹಾಗಾಗಿ, ವಿಶ್ವಾಸಮತ ಕೋರುವಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ರಾಜ್ಯಪಾಲರು ಸೂಚಿಸಿದ್ದರು.

ಅನರ್ಹತೆ ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ಇತ್ಯರ್ಥ ಆಗುವವರೆಗೆ ವಿಶ್ವಾಸಮತ ಕೋರಿಕೆಗೆ ತಡೆ ಕೊಡಬೇಕು ಎಂದು ಉದ್ಧವ್ ಠಾಕ್ರೆ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಕೋರಿಕೆಯನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿತ್ತು. ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿ ಹುದ್ದೆಗೆ ಬುಧವಾರ ರಾಜೀನಾಮೆ ನೀಡಿದ್ದರು.

ಇ.ಡಿ. ಸರ್ಕಾರ: ಕಾಂಗ್ರೆಸ್ ಲೇವಡಿ
ಬಿಜೆಪಿ ಮತ್ತು ಶಿವಸೇನಾ ಬಂಡಾಯ ಶಾಸಕರು ಜತೆಯಾಗಿ ರಚಿಸಿರುವ ಮಹಾರಾಷ್ಟ್ರದ ಹೊಸ ಸರ್ಕಾರವನ್ನು ‘ಇ.ಡಿ. ಸರ್ಕಾರ’ ಎಂದು ಕಾಂಗ್ರೆಸ್ ಪಕ್ಷವು ಲೇವಡಿ ಮಾಡಿದೆ. ಏಕನಾಥ ಶಿಂಧೆ ಹೆಸರಿನ ಮೊದಲ ಅಕ್ಷರ ಇಂಗ್ಲಿಷ್‌ನ ‘ಇ’ ಮತ್ತು ದೇವೇಂದ್ರ ಫಡಣವೀಸ್‌ ಅವರ ಹೆಸರಿನ ಮೊದಲ ಅಕ್ಷರ ಇಂಗ್ಲಿಷ್‌ನ ‘ಡಿ’ಯನ್ನು ಒಟ್ಟು ಸೇರಿಸಿ ಹೀಗೆ ಲೇವಡಿ ಮಾಡಲಾಗಿದೆ.ಜತೆಗೆ, ಜಾರಿ ನಿರ್ದೇಶನಾಲಯವನ್ನು (ಇ.ಡಿ.) ಅಕ್ರಮವಾಗಿ ಬಳಸಿ ಈ ಸರ್ಕಾರ ರೂಪುಗೊಳ್ಳುವಂತೆ ಮಾಡಲಾಗಿದೆ ಎಂದೂ ಕಾಂಗ್ರೆಸ್‌ ಆರೋಪಿಸಿದೆ. ಈ ಹಿಂದೆ ಅಧಿಕಾರದಲ್ಲಿ ಇದ್ದ ಮಹಾ ವಿಕಾಸ ಆಘಾಡಿ ಸರ್ಕಾರದಲ್ಲಿ ಕಾಂಗ್ರೆಸ್ ಪಕ್ಷವೂ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.