ಮುಂಬೈ: ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಕಾರ್ಯಕರ್ತರ ಕಾಲು ಮುರಿಯುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಬಣದ ಶಾಸಕರೊಬ್ಬರು ಕರೆ ನೀಡಿದ್ದಾರೆ. ಇದು ಉಭಯ ಬಣಗಳ ನಡುವಣ ವೈಮನಸ್ಸು ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ.
ಕಾರ್ಯಕರ್ತರನ್ನು ಉದ್ದೇಶಿಸಿ ಶಿಂದೆ ಬಣದ ಶಾಸಕ ಪ್ರಕಾಶ್ ಸುರ್ವೆ ನೀಡಿರುವ ಹೇಳಿಕೆಯ ವಿಡಿಯೊ ತುಣುಕು ಸೋಮವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಕಾನೂನು ಕ್ರಮ ಎದುರಾದಲ್ಲಿ ಜಾಮೀನು ಕೊಡಿಸುವುದಾಗಿಯೂ ಸುರ್ವೆ ಹೇಳಿದ್ದಾರೆ.
ಈ ವಿಚಾರವಾಗಿ ಉದ್ಧವ್ ಬಣದ ಕಾರ್ಯಕರ್ತರು ಮುಂಬೈಯ ದಹಿಸಾರ್ ಪೊಲೀಸರಿಗೆ ದೂರು ನೀಡಿದ್ದು, ಸುರ್ವೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಸುರ್ವೆ ಅವರು ವಾಯವ್ಯ ಮುಂಬೈಯ ಮಗಾಠಾಣೆ ಕ್ಷೇತ್ರದ ಶಾಸಕರಾಗಿದ್ದಾರೆ.
‘ನಾವು ಸುಮ್ಮನಿರುವುದಿಲ್ಲ. ಅವರ (ಉದ್ಧವ್ ಬಣದ ಕಾರ್ಯಕರ್ತರ) ಸ್ಥಾನವೇನೆಂಬುದನ್ನು ತೋರಿಸಬೇಕು. ಅವರು ನಮ್ಮನ್ನು ಬೆದರಿಸುವುದನ್ನು ಸಹಿಸಲಾಗದು. ಯಾರಾದರೂ ಏನಾದರೂ ಹೇಳಿದರೆ ಅವರಿಗೆ ಹೊಡೆಯಿರಿ. ಅವರ ಕೈಗಳನ್ನು ಮುರಿಯಲಾಗದಿದ್ದರೆ ಕಾಲುಗಳನ್ನು ಮುರಿಯಿರಿ. ಮರುದಿನವೇ ನಿಮಗೆ ಜಾಮೀನು ಕೊಡಿಸುವ ಭರವಸೆ ನೀಡುತ್ತಿದ್ದೇನೆ. ನಮಗೆ ಚುಚ್ಚುವ ಯಾರನ್ನೂ ನಾವು ಬಿಡುವುದಿಲ್ಲ’ ಎಂದು ಶಾಸಕರು ಹೇಳಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ವಿಡಿಯೊ ತುಣುಕಿನಲ್ಲಿದೆ.
ಈ ವಿಚಾರವಾಗಿ ಸುರ್ವೆ ಅವರನ್ನು ಸಂಪರ್ಕಿಸಿದಾಗ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
‘ಪ್ರಕಾಶ್ ಸುರ್ವೆ ವಿರುದ್ಧ ನಮಗೆ ಲಿಖಿತ ದೂರು ಸಲ್ಲಿಕೆಯಾಗಿದೆ. ದೂರುದಾರರು ಸುರ್ವೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ನಾವು ಪರಿಶೀಲನೆ ನಡೆಸುತ್ತಿದ್ದೇವೆ. ತನಿಖೆ ನಡೆಯುತ್ತಿದೆ. ಈವರೆಗೆ ಎಫ್‌ಐಆರ್ ದಾಖಲಿಸಿಲ್ಲ’ ಎಂದು ದಹಿಸಾರ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಮಧ್ಯೆ, ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ಕಾರ್ಮಿಕರಿಗೆ ಮಧ್ಯಾಹ್ನದ ವೇಳೆ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ಶಿವಸೇನಾ ಶಾಸಕ ಸಂತೋಷ್ ಬಂಗಾರ್ ಅವರು ಬಿಸಿಯೂಟ ತಯಾರಕನಿಗೆ ಕಪಾಳಮೋಕ್ಷ ಮಾಡಿದ ವಿಚಾರವೂ ಚರ್ಚೆಗೆ ಗ್ರಾಸವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.