ADVERTISEMENT

ಕಿರಿಯರಿಗೆ ಅವಕಾಶ ನೀಡುವ ಬಗ್ಗೆ ಹಿರಿಯರು ಯೋಚಿಸಬೇಕು: ಪೈಲಟ್‌

ಪಿಟಿಐ
Published 20 ಜನವರಿ 2023, 15:23 IST
Last Updated 20 ಜನವರಿ 2023, 15:23 IST
ಸಚಿನ್‌ ಪೈಲಟ್‌
ಸಚಿನ್‌ ಪೈಲಟ್‌   

ಜೈಪುರ/ಹನುಮಾನ್‌ಗಢ (ಪಿಟಿಐ): ನ್ಯೂಜಿಲೆಂಡ್‌ ‍ಪ್ರಧಾನಿ ಜೆಸಿಂಡ ಆರ್ಡರ್ನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದನ್ನು ಉಲ್ಲೇಖಿಸಿ, ಕಾಂಗ್ರೆಸ್‌ ನಾಯಕ ಸಚಿನ್‌ ಪೈಲಟ್‌ ಅವರು ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಅವರನ್ನು ಶುಕ್ರವಾರ ಮತ್ತೊಮ್ಮೆ ಟೀಕಿಸಿದ್ದಾರೆ.

‘ಜೆಸಿಂಡ ಅವರು ಎಂಟು ವರ್ಷದ ಹಿಂದೆ ನ್ಯೂಜಿಲೆಂಡ್‌ನ ಪ್ರಧಾನಿಯಾದರು. ಆದರೆ, ತಮ್ಮ ಜನಪ್ರಿಯತೆ ಕಡಿಮೆಯಾಗಿದ್ದರಿಂದ ಜೆಸಿಂಡ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಪಕ್ಷ ಕಟ್ಟುವ ಕಾರ್ಯದಲ್ಲಿ ತೊಡಗುವುದಾಗಿಯೂ ಹೇಳಿದರು. ಆದ್ದರಿಂದ, ಕಿರಿಯರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಹಿರಿಯರು ಯೋಚಿಸಬೇಕು’ ಎಂದರು.

‘ಕಾಂಗ್ರೆಸ್‌ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಅವರು 2004ರಲ್ಲಿ ನನ್ನನ್ನೂ ಒಳಗೊಂಡು 15–20 ಯುವಕರನ್ನು ಕರೆಸಿಕೊಂಡು ಪ್ರಣಾಳಿಕೆ ಕುರಿತು ಚರ್ಚಿಸಿದ್ದರು. ಪ್ರಣಾಳಿಕೆಯಲ್ಲಿ ಏನಿರಬೇಕು ಎನ್ನುವ ನಮ್ಮ ಆಕಾಂಕ್ಷೆಯನ್ನೂ ಅವರು ಕೇಳಿದ್ದರು’ ಎಂದರು.

ADVERTISEMENT

ಜೈಪುರ ಮಹಾರಾಜ ಕಾಲೇಜಿನ ವಿದ್ಯಾರ್ಥಿ ಸಂಘದ ಕಚೇರಿಯನ್ನು ಉದ್ಘಾಟಿಸಿ, ವಿದ್ಯಾರ್ಥಿಗಳೊಂದಿಗೆ ಅವರು ಮಾತನಾಡಿದರು. ಈ ವೇಳೆ ಗೆಹೆಲೋತ್‌ ಅವರ ಹೆಸರನ್ನು ಉಲ್ಲೇಖಿಸದೆಯೇ, ತಮ್ಮ ಕುರಿತು ಗೆಹೆಲೋತ್‌ ಅವರು ಬಳಸಿದ ಭಾಷೆಯನ್ನು ಟೀಕಿಸಿದರು.

‘ಯಾರಿಗಾದರೂ ಸರಿ, ನಾಲಿಗೆ ಮೇಲೆ ಹಿಡಿತ ಇರಬೇಕು. ಇನ್ನೊಬ್ಬರು ನಮ್ಮ ಬಗ್ಗೆ ಕೆಟ್ಟ ಶಬ್ದ ಬಳಸಿದರೆ, ಸಹಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವಂಥ ಶಬ್ದಗಳನ್ನು ನಾವು ಬೇರೆಯವರಿಗೆ ಬಳಸಬಾರದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.