ADVERTISEMENT

ಚುನಾವಣಾ ಬಾಂಡ್ ಮಾಹಿತಿ: ಆರ್‌ಟಿಐಗೆ ಇದೆ, ಸಂಸತ್ತಿಗೆ ಇಲ್ಲ

​ಪ್ರಜಾವಾಣಿ ವಾರ್ತೆ
Published 21 ಜುಲೈ 2021, 19:16 IST
Last Updated 21 ಜುಲೈ 2021, 19:16 IST
   

ನವದೆಹಲಿ: ಚುನಾವಣಾ ಬಾಂಡ್‌ಗಳ 15 ಹಾಗೂ 16ನೇ ಹಂತದ ಮಾರಾಟದ ಬಗ್ಗೆ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿಯಲ್ಲಿ ನೀಡಿದ ಮಾಹಿತಿಯು ಸಾರ್ವಜನಿಕರಿಗೆ ಈಗಾಗಲೇ ಲಭ್ಯವಾಗಿದೆ. ಆದರೆ, ಇದೇ ಮಾಹಿತಿಯನ್ನು ಸಂಸತ್ತಿನಲ್ಲಿ ಒದಗಿಸಲು ಇನ್ನೂ ಸಮಯ ಹಿಡಿಯುವುದಾಗಿ ಹಣಕಾಸು ಸಚಿವಾಲಯವು ಮಂಗಳವಾರ ತಿಳಿಸಿದೆ.

ಈ ಬಗ್ಗೆ ರಾಜ್ಯಸಭಾ ಸಂಸದ, ತೃಣಮೂಲ ಕಾಂಗ್ರೆಸ್‌ನ ಶಂತನು ಸೇನ್‌ ಅವರು ಕೇಳಿದ್ದ ಪ್ರಶ್ನೆಗೆ, ಸರ್ಕಾರ ಈ ಉತ್ತರ ನೀಡಿದೆ.

ಪ್ರಶ್ನೆಗಳ ಸರಣಿಯನ್ನೇ ಮುಂದಿಟ್ಟಿದ್ದ ಸಂಸದ ಸೇನ್‌, ‘ಶಾಖಾವಾರು ಮಾರಾಟವಾದಚುನಾವಣಾ ಬಾಂಡ್‌ಗಳು, ಅವುಗಳ ಮೊತ್ತ, ನಗದೀಕರಣಗೊಂಡ ಬಾಂಡ್‌ಗಳು, ಯಾವ ಪಕ್ಷಗಳಿಗೆ ಎಷ್ಟು ಹಣ ಸಂದಾಯವಾಗಿದೆ, ಬಾಂಡ್‌ ನೀಡಿಕೆ ಯೋಜನೆಯು ಆರಂಭವಾದ 2018ನೇ ವರ್ಷದಿಂದ ಇಲ್ಲಿಯವರೆಗೆ ಮುದ್ರಣಗೊಂಡ ಚುನಾವಣಾ ಬಾಂಡ್‌ಗಳು ಎಷ್ಟು ಹಾಗೂ ಅವುಗಳ ಮಾರಾಟದಿಂದ ಎಸ್‌ಬಿಐ ಪಡೆದ ಕಮಿಷನ್‌ ಎಷ್ಟು’ ಎಂಬ ವಿವರ ಕೇಳಿದ್ದರು.

ADVERTISEMENT

ಈ ಬಗ್ಗೆ ಸದನಕ್ಕೆ ಲಿಖಿತ ಉತ್ತರ ನೀಡಿದ ಹಣಕಾಸು ಇಲಾಖೆಯ ರಾಜ್ಯ ಸಚಿವ ಪಂಕಜ್‌ ಚೌಧರಿ, ‘ಈ ವಿವರ ಸಲ್ಲಿಸಲು, ಸರ್ಕಾರಕ್ಕೆ ಇನ್ನಷ್ಟು ಕಾಲಾವಕಾಶ ಬೇಕು’ ಎಂದಿದ್ದಾರೆ.

ಆದರೆ, ಪಶ್ಚಿಮ ಬಂಗಾಳವೂ ಸೇರಿದಂತೆ ಐದು ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಜ.1ರಿಂದ ಜ.10 ರವರೆಗೆ (15ನೇ ಹಂತ) ಹಾಗೂ ಏ.1ರಿಂದ ಏ.10ರ ಅವಧಿಯಲ್ಲಿ (16ನೇ ಹಂತ) ಮಾರಾಟವಾದ ಚುನಾವಣಾ ಬಾಂಡ್‌ಗಳ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ವಿವರ ಕೋರಿದ್ದ ಲೋಕೇಶ್‌ ಬಾತ್ರಾ ಎಂಬುವವರಿಗೆ ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆ ಹಾಗೂ ಎಸ್‌ಬಿಐ ಈಗಾಗಲೇ ವಿಸ್ತೃತ ವರದಿ ನೀಡಿವೆ.

15ನೇ ಹಂತದಲ್ಲಿ ₹ 42.10 ಕೋಟಿ ಮೊತ್ತದ ಚುನಾವಣಾ ಬಾಂಡ್‌ಗಳು ಮಾರಾಟವಾಗಿದ್ದು, ₹ 42.07 ಕೋಟಿ ಮೊತ್ತವು ರಾಜಕೀಯ ಪಕ್ಷಗಳಿಗೆ ಸಂದಾಯವಾಗಿದೆ. 16ನೇ ಹಂತದಲ್ಲಿ ₹695.34 ಕೋಟಿ ಮೊತ್ತದ ಬಾಂಡ್‌ಗಳು ಮಾರಾಟವಾಗಿದ್ದು, ₹1,000 ಮೌಲ್ಯದ ಎರಡು ಬಾಂಡ್‌ಗಳು ಮಾತ್ರ ಯಾವ ಪಕ್ಷಕ್ಕೂ ಸಂದಾಯವಾಗಿಲ್ಲ. ಏಪ್ರಿಲ್‌ನಲ್ಲಿ, ಕೋಲ್ಕತ್ತಾದ ಎಸ್‌ಬಿಐ ಮುಖ್ಯ ಶಾಖೆಯೊಂದರಲ್ಲಿಯೇ ₹ 176.19 ಕೋಟಿ ಮೊತ್ತದ ಚುನಾವಣಾ ಬಾಂಡ್‌ಗಳು ಮಾರಾಟವಾಗಿವೆ. ನವದೆಹಲಿ, ಚೆನ್ನೈ ಹಾಗೂ ಮುಂಬೈನ ಮುಖ್ಯ ಶಾಖೆಯಿಂದ ಕ್ರಮವಾಗಿ ₹167.5 ಕೋಟಿ, ₹141.5 ಕೋಟಿ ಹಾಗೂ ₹ 91.5 ಕೋಟಿ ಮೊತ್ತದ ಬಾಂಡ್‌ಗಳು ಮಾರಾಟವಾಗಿವೆ ಎಂಬುದು ಭಾತ್ರಾ ಅವರು ಪಡೆದ ಮಾಹಿತಿಯಿಂದ ತಿಳಿದುಬಂದಿದೆ.

ಈ ಎರಡೂ ಹಂತಗಳ ಮಾಹಿತಿಯನ್ನು ಅವರು ಕ್ರಮವಾಗಿ ಫೆ. 17ರಂದು ಏ. 27ರಂದು ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.