ADVERTISEMENT

ವಲಸೆ ಕಾರ್ಮಿಕರಿಗೆ ಮತ ಚಲಾಯಿಸುವ ಸೌಲಭ್ಯ

ಹೊಸ ತಂತ್ರಜ್ಞಾನಕ್ಕಾಗಿ ಮದ್ರಾಸ್‌ ಐಐಟಿ ಜತೆ ಕೈಜೋಡಿಸಿದ ಆಯೋಗ

ಪಿಟಿಐ
Published 16 ಫೆಬ್ರುವರಿ 2020, 22:20 IST
Last Updated 16 ಫೆಬ್ರುವರಿ 2020, 22:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಲಸೆ ಕಾರ್ಮಿಕರು ಸೇರಿದಂತೆ ಅನಿವಾರ್ಯ ಕಾರಣಗಳಿಂದ ಬೇರೆ ಸ್ಥಳಕ್ಕೆ ತೆರಳಿದ ಮತದಾರರಿಗೂ ಮತ ಚಲಾಯಿಸಲು ಅನುಕೂಲ ಕಲ್ಪಿಸಲು ಚುನಾವಣಾ ಆಯೋಗ ಮುಂದಾಗಿದೆ.

ಮದ್ರಾಸ್‌ನ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಸಹಯೋಗದಲ್ಲಿ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಇದರಿಂದ ಮತದಾರರು ತಮ್ಮ ಕ್ಷೇತ್ರಗಳಲ್ಲಿನ ನಿರ್ದಿಷ್ಟ ಮತಗಟ್ಟೆಗೇ ತೆರಳಬೇಕಾಗಿಲ್ಲ. ಯಾವುದೇ ನಗರದಲ್ಲಿದ್ದರೂ ಮತ ಚಲಾಯಿಸಬಹುದು. ಆದರೆ, ಚುನಾವಣಾ ಆಯೋಗ ಸ್ಥಾಪಿಸಿದ ಮತಗಟ್ಟೆಗೇ ಹೋಗಬೇಕು.

‘ಈ ತಂತ್ರಜ್ಞಾನ ಅಭಿವೃದ್ಧಿ ಹಂತದಲ್ಲಿದ್ದು, ಸಾಕಷ್ಟು ಸಂಶೋಧನಾ ಕಾರ್ಯ ನಡೆಯಬೇಕಾಗಿದೆ. ಇದು ಇಂಟರ್‌ನೆಟ್‌ ಆಧಾರಿತವಾಗಿದ್ದು, ಬಯೋಮೆಟ್ರಿಕ್‌ ಉಪಕರಣ, ವೆಬ್‌ ಕ್ಯಾಮೆರಾ ಒಳಗೊಂಡ ವಿದ್ಯುನ್ಮಾನ ಮತದಾನದ ವ್ಯವಸ್ಥೆಯಾಗಿದೆ’ ಎಂದು ಆಯೋಗದ ಹಿರಿಯ ಉಪ ಚುನಾವಣಾ ಆಯುಕ್ತ ಸಂದೀಪ್‌ ಸಕ್ಸೆನಾ ವಿವರ ನೀಡಿದರು.

ADVERTISEMENT

‘ಉದಾಹರಣೆಗೆ ಲೋಕಸಭಾ ಚುನಾವಣೆ ನಡೆಯುವಾಗ ಚೆನ್ನೈನ ಮತದಾರ ದೆಹಲಿಯಲಿದ್ದಾನೆ ಎಂದು ಭಾವಿಸಿಕೊಳ್ಳೋಣ. ಆತ ಚೆನ್ನೈಗೆ ತೆರಳಿ ಮತ ಚಲಾಯಿಸಬೇಕಾಗಿಲ್ಲ ಅಥವಾ ಮತದಾನದಿಂದಲೂ ವಂಚಿತನಾಗಬೇಕಾಗಿಲ್ಲ. ದೆಹಲಿಯ ಪ್ರಮುಖ ಸ್ಥಳದಲ್ಲಿ ಚುನಾವಣಾ ಆಯೋಗ ನಿಗದಿಪಡಿಸಿದ ಸ್ಥಳಕ್ಕೆ ತೆರಳಿ ನಿಗದಿಪಡಿಸಿದ ಅವಧಿಯಲ್ಲಿ ಮತ ಚಲಾಯಿಸಬಹುದು’ ಎಂದು ತಿಳಿಸಿದರು.

‘ಮತದಾನಕ್ಕೆ ಮುನ್ನ ತಂತ್ರಜ್ಞಾನದ ಸೌಲಭ್ಯದಿಂದ ಮತದಾರರನ್ನು ಗುರುತಿಸಿ ದೃಢಪಡಿಸಿಕೊಳ್ಳಲಾಗುವುದು. ಬಳಿಕ, ಇ–ಮತಪತ್ರದ ಮೂಲಕ ಮತಚಲಾಯಿಸಲು ಅವಕಾಶ ದೊರೆಯಲಿದೆ. ಆದರೆ, ಮತದಾರರು ಈ ಸೌಲಭ್ಯ ಪಡೆಯಲು ತಮ್ಮ ವ್ಯಾಪ್ತಿಯ ಚುನಾವಣಾಧಿಕಾರಿಗೆ ಮುಂಚಿತವಾಗಿಯೇ ಅರ್ಜಿ ಸಲ್ಲಿಸಬೇಕು’ ಎಂದು ಮಾಹಿತಿ ನೀಡಿದರು.

‘ಈ ತಂತ್ರಜ್ಞಾನ ಸಮರ್ಪಕವಾಗಿದ್ದರೆ ರಾಜಕೀಯ ಪಕ್ಷಗಳ ಜತೆ ಸಮಾಲೋಚನೆ ನಡೆಸಿಯೇ ಅನುಷ್ಠಾನಗೊಳಿಸಲಾಗುವುದು. ವಲಸೆ ಕಾರ್ಮಿಕರು ಮತದಾನದಿಂದ ವಂಚಿತರಾಗುತ್ತಿರುವುದರಿಂದ ಅವರಿದ್ದ ನಗರದಲ್ಲೇ ಮತ ಚಲಾಯಿಸಲು ಸೌಲಭ್ಯ ಕಲ್ಪಿಸಬೇಕು ಎನ್ನುವ ಬೇಡಿಕೆಯನ್ನು ರಾಜಕೀಯ ಪಕ್ಷಗಳು ಹಲವು ವರ್ಷಗಳಿಂದ ಮುಂದಿಟ್ಟಿವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.