ADVERTISEMENT

ಚುನಾವಣಾ ಆಯೋಗವು ಅಧಿಕಾರದಲ್ಲಿರುವವರ ಗುಲಾಮನಿದ್ದಂತೆ: ಉದ್ಧವ್ ಠಾಕ್ರೆ ವಾಗ್ದಾಳಿ

ಪಿಟಿಐ
Published 5 ಮಾರ್ಚ್ 2023, 16:08 IST
Last Updated 5 ಮಾರ್ಚ್ 2023, 16:08 IST
ಉದ್ಧವ್ ಠಾಕ್ರೆ (ಸಂಗ್ರಹ ಚಿತ್ರ)
ಉದ್ಧವ್ ಠಾಕ್ರೆ (ಸಂಗ್ರಹ ಚಿತ್ರ)   

ರತ್ನಗಿರಿ: ಚುನಾವಣಾ ಆಯೋಗವು ಅಧಿಕಾರದಲ್ಲಿರುವವರ 'ಗುಲಾಮ'ನಿದ್ದಂತೆ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಏಕನಾಥ ಶಿಂದೆ ಬಣವೇ ನಿಜವಾದ ಶಿವಸೇನಾ ಎಂದಿರುವ ಚುನಾವಣಾ ಆಯೋಗ, ಪಕ್ಷ ಮೂಲ ಗುರುತಾದ ಬಿಲ್ಲು ಮತ್ತು ಬಾಣವನ್ನು ಆ ಬಣಕ್ಕೆ ಫೆಬ್ರುವರಿ 17ರಂದು ನಿಗದಿ ಮಾಡಿದೆ. ಅಷ್ಟಲ್ಲದೆ, ಪಕ್ಷದ ಮೇಲಿನ ಹಿಡಿತದ ಸಲುವಾಗಿ ಉಭಯ ಬಣಗಳು ನಡೆಸಿದ ಹೋರಾಟದ ಕುರಿತು 78 ಪುಟಗಳ ವರದಿ ಮಾಡಿದ್ದು, ಠಾಕ್ರೆ ಬಣಕ್ಕೆ ಈಗಾಗಲೇ ನೀಡಿರುವ 'ಉರಿಯುವ ಜ್ವಾಲೆ' ಗುರುತನ್ನು ರಾಜ್ಯದಲ್ಲಿನ ಉಪ ಚುನಾವಣೆಗಳು ಮುಗಿಯುವವರೆಗೂ ಬಳಸಲು ಅನುಮತಿ ನೀಡಿದೆ.

2019ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ 55 ವಿಜೇತ ಅಭ್ಯರ್ಥಿಗಳ ಪೈಕಿ ಶೇ 76 ಮಂದಿ ಏಕನಾಥ್ ಶಿಂಧೆ ಅವರನ್ನು ಬೆಂಬಲಿಸುತ್ತಿದ್ದಾರೆ. ಉದ್ಧವ್ ಠಾಕ್ರೆ ಪರವಾಗಿ ಶೇ. 23.5 ಮಂದಿ ಮಾತ್ರ ಇದ್ದಾರೆ ಎಂದೂ ಆಯೋಗ ಹೇಳಿದೆ.

ADVERTISEMENT

ಪಕ್ಷದ ಹೆಸರು ಹಾಗೂ ಚಿಹ್ನೆ ಕಳೆದುಕೊಂಡ ಬಳಿಕ ನಡೆದ ಮೊದಲ ರ‍್ಯಾಲಿಯಲ್ಲಿ ಮಾತನಾಡಿರುವ ಉದ್ಧವ್‌, ತಮ್ಮ ತಂದೆ (ಬಾಳ್ ಠಾಕ್ರೆ) ಸ್ಥಾಪಿಸಿರುವ ಪಕ್ಷವನ್ನು ನನ್ನಿಂದ ದೂರ ಮಾಡಲು ಚುನಾವಣಾ ಆಯೋಗಕ್ಕೆ ಎಂದಿಗೂ ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.

'ನೀವು (ಚುನಾವಣಾ ಆಯೋಗ) ಪಕ್ಷದ ಹೆಸರು ಮತ್ತು ಗುರುತನ್ನು ನಮ್ಮಿಂದ ದೂರ ಮಾಡಿದ್ದೀರಿ. ಆದರೆ, ಶಿವ ಸೇನಾವನ್ನು ನಮ್ಮಿಂದ ದೂರ ಮಾಡಲಾರಿರಿ' ಎಂದಿದ್ದಾರೆ.

ರತ್ನಗಿರಿ ಜಿಲ್ಲೆಯ ಖೇಡ್‌ನಲ್ಲಿ ನಡೆದ ಈ ಸಮಾವೇಶದಲ್ಲಿ ನೆರೆದಿದ್ದವರನ್ನು ಉದ್ದೇಶಿಸಿ, 'ನಿಮಗೆ ನೀಡಲು ನನ್ನ ಬಳಿ ಏನೂ ಇಲ್ಲ. ನಿಮ್ಮ ಆಶೀರ್ವಾದ ಮತ್ತು ಬೆಂಬಲ ಬಯಸಿ ಬಂದಿದ್ದೇನೆ' ಎಂದು ಹೇಳಿದ್ದಾರೆ.

ಬಿಜೆಪಿ ವಿರುದ್ಧವೂ ಉದ್ಧವ್‌ ವಾಗ್ದಾಳಿ ನಡೆಸಿದ್ದಾರೆ.

ಬಾಳ್‌ ಠಾಕ್ರೆ ಜೊತೆಗಿದ್ದಾಗ ಬಿಜೆಪಿಯನ್ನು ಯಾರಿಂದಲೂ ಮುಟ್ಟಲು ಸಾಧ್ಯವಿರಲಿಲ್ಲ ಎಂದಿರುವ ಅವರು, ಮಹಾರಾಷ್ಟ್ರದಲ್ಲಿ ತಮ್ಮ ತಂದೆಯ ಹೆಸರನ್ನು ಬಳಸದೆ ಪ್ರಧಾನಿ ನರೇಂದ್ರ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಮತ ಕೇಳಿ ಎಂದು ಸವಾಲು ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.