ಬಿಹಾರದ ಮೂಲದ ಏಳು ಮತದಾರರ ಜೊತೆ ರಾಹುಲ್ ಗಾಂಧಿ
ನವದೆಹಲಿ: ‘ನನಗೆ ಜೀವನದಲ್ಲಿ ಅನೇಕ ಆಸಕ್ತಿದಾಯಕ ಅನುಭವಗಳಾಗಿವೆ. ಆದರೆ, ಸತ್ತವರ ಜೊತೆ ಟೀ ಕುಡಿಯುವ ಅನುಭವವಾಗಿರಲಿಲ್ಲ. ಈ ವಿಶೇಷ ಘಟನೆಗೆ ಕಾರಣವಾದ ಚುನಾವಣಾ ಆಯೋಗಕ್ಕೆ ಧನ್ಯವಾದಗಳು ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬುಧವಾರ ತಿಳಿಸಿದ್ದಾರೆ.
ಬಿಹಾರದ ಮೂಲದ ಏಳು ಮತದಾರರು ರಾಹುಲ್ ಗಾಂಧಿ ಅವರ ಮನೆಗೆ ಭೇಟಿ ನೀಡಿದ್ದರು. ಈ ವೇಳೆ, ‘ಮೃತಪಟ್ಟಿದ್ದಾರೆ’ ಎಂದು ತಮ್ಮನ್ನು ಮತದಾರರ ಪಟ್ಟಿಯಿಂದ ತೆಗೆಯಲಾಗಿದೆ ಎಂದು ಅವರು ರಾಹುಲ್ ಅವರ ಬಳಿ ಹೇಳಿಕೊಂಡಿದ್ದಾರೆ. ಇದನ್ನು ರಾಹುಲ್ ಗಾಂಧಿ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರ ಜೊತೆಗಿನ ವಿಡಿಯೊವನ್ನು ಕೂಡ ಹಂಚಿಕೊಂಡಿದ್ದಾರೆ.
ವಿಡಿಯೊದಲ್ಲಿ ವ್ಯಕ್ತಿಯೊಬ್ಬ ‘ಎಸ್‌ಐಆರ್ ವೇಳೆ ನಾವು ‘ಮೃತಪಟ್ಟಿದ್ದೇವೆ’ ಎಂದು ಚುನಾವಣಾ ಆಯೋಗ ನಿರ್ಧರಿಸಿರುವುದು ಗೊತ್ತಾಗಿದೆ. ಬಿಹಾರದ 65 ಲಕ್ಷ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆಯಲಾಗಿದೆ’ ಎಂದಿದ್ದಾರೆ.
‘ನಮ್ಮ ಮತ ಚಲಾಯಿಸುವ ಹಕ್ಕನ್ನು ಮರಳಿ ಪಡೆದುಕೊಳ್ಳಲು ನಾವು ಸುಪ್ರೀಂ ಕೋರ್ಟಿನ ಮೆಟ್ಟಿಲೇರಿದ್ದೇವೆ. ಬಿಹಾರದಲ್ಲಿನ ಎಸ್‌ಐಆರ್ ವಿರುದ್ಧದ ಪ್ರಕರಣವನ್ನು ಸುಪ್ರೀಂ ಕೋರ್ಟ್ ಆಲಿಸಿದೆ’ ಎಂದು ಆ ಗುಂಪು ರಾಹುಲ್‌ಗೆ ವಿವರಿಸಿದೆ.
ಏಳು ಜನರು ಬಿಹಾರದ ರಾಘೋಪುರ ಮೂಲದವರಾಗಿದ್ದಾರೆ. ತೇಜಸ್ವಿ ಯಾದವ್ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ.
ಚುನಾವಣಾ ಆಯೋಗದ ಎಸ್‌ಐಆರ್ ಕೂಡ ಅವರನ್ನು ಮೃತಪಟ್ಟಿದೆ ಎಂದು ಮತದಾರರ ಪಟ್ಟಿಯಲ್ಲಿ ನಮೂದಿಸಿದೆ. ಇದು ತಾಂತ್ರಿಕವಾಗಿ ಆಗಿರುವ ತಪ್ಪಲ್ಲ. ಬದಲಾಗಿ ಇದರಲ್ಲಿ ರಾಜಕೀಯ ಹಕ್ಕು ನಿರಾಕರಣೆ ಕಣ್ಣಿಗೆ ಕಾಣುತ್ತಿದೆ ಎಂದು ಕಾಂಗ್ರೆಸ್ ವಕ್ತಾರರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.