ನವದೆಹಲಿ: ದೇಶದಾದ್ಯಂತ ನಿಯಮಿತ ಅಂತರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ನಡೆಸುವುದಕ್ಕೆ ಸಂಬಂಧಿಸಿದಂತೆ ನೀಡುವ ಯಾವುದೇ ನಿರ್ದೇಶನವು ಚುನಾವಣಾ ಆಯೋಗಕ್ಕಿರುವ ವಿಶೇಷ ಅಧಿಕಾರ ವ್ಯಾಪ್ತಿಯನ್ನು ಅತಿಕ್ರಮಿಸಿದಂತೆ ಎಂದು ಆಯೋಗವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಈ ಸಂಬಂಧ ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿರುವ ಆಯೋಗವು, ಮತದಾರರ ಪಟ್ಟಿಗಳನ್ನು ತಯಾರಿಸುವ ಮತ್ತು ಪರಿಷ್ಕರಿಸುವ ಮೇಲ್ವಿಚಾರಣೆಯು ಚುನಾವಣಾ ಆಯೋಗದ ಕೆಲಸವಾಗಿದೆ. ಅದು ಆಯೋಗದ ಸಾಂವಿಧಾನಿಕ ಮತ್ತು ಶಾಸನಬದ್ಧ ಅಧಿಕಾರವೂ ಆಗಿದೆ ಎಂದು ಉಲ್ಲೇಖಿಸಿದೆ.
ದೇಶದಾದ್ಯಂತ, ಚುನಾವಣೆಗಳಿಗೆ ಮುನ್ನ ನಿಯಮಿತವಾಗಿ ಮತದಾರರ ಪಟ್ಟಿಯ ಎಸ್‌ಐಆರ್ ನಡೆಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇದು ಸಾಧ್ಯವಾದರೆ, ದೇಶದ ಪ್ರಜೆಗಳು ಮಾತ್ರ ದೇಶದ ರಾಜಕೀಯ ಮತ್ತು ನೀತಿಯನ್ನು ನಿರ್ಧರಿಸುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದೆ.
‘2025ರ ಜುಲೈ 5ರಂದು ಬಿಹಾರ ಹೊರತುಪಡಿಸಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ (ಸಿಇಒ) ಪತ್ರ ಬರೆಯಲಾಗಿದೆ. 2026ರ ಜನವರಿ 1 ಅನ್ನು ಅರ್ಹತಾ ದಿನಾಂಕ ಎಂದು ಉಲ್ಲೇಖಿಸಿ ಎಸ್‌ಐಆರ್‌ಗೆ ಪೂರ್ವ ಪರಿಷ್ಕರಣಾ ಚಟುವಟಿಕೆಗಳನ್ನು ಆರಂಭಿಸಲು ಸಿಇಒಗಳಿಗೆ ನಿರ್ದೇಶಿಸಲಾಗಿದೆ’ ಎಂದು ಆಯೋಗ ಅಫಿಡವಿಟ್‌ಲ್ಲಿ ಉಲ್ಲೇಖಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.