ADVERTISEMENT

ಚುನಾವಣಾ ಆಯೋಗದ ಕಾರ್ಯ ಸಂವಿಧಾನಕ್ಕೆ ಸವಾಲು: ಬಿ. ಸುದರ್ಶನ ರೆಡ್ಡಿ

ಉಪರಾಷ್ಟ್ರಪತಿ ಅಭ್ಯರ್ಥಿ ಬಿ. ಸುದರ್ಶನ ರೆಡ್ಡಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 15:53 IST
Last Updated 1 ಸೆಪ್ಟೆಂಬರ್ 2025, 15:53 IST
ಸುದರ್ಶನ್‌ ರೆಡ್ಡಿ
ಸುದರ್ಶನ್‌ ರೆಡ್ಡಿ   

ಹೈದರಾಬಾದ್‌: ಚುನಾವಣಾ ಆಯೋಗದ ಕಾರ್ಯನಿರ್ವಹಣೆಯು ಭಾರತದ ಸಂವಿಧಾನ ಪ್ರಸ್ತುತ ಎದುರಿಸುತ್ತಿರುವ ದೊಡ್ಡ ಸವಾಲನ್ನು ಪ್ರತಿನಿಧಿಸುತ್ತದೆ ಎಂದು ಉಪರಾಷ್ಟ್ರಪತಿ ಚುನಾವಣೆಯ ವಿಪಕ್ಷಗಳ ಅಭ್ಯರ್ಥಿ, ನಿವೃತ್ತ ನ್ಯಾಯಮೂರ್ತಿ ಬಿ. ಸುದರ್ಶನ ರೆಡ್ಡಿ ಅವರು ಸೋಮವಾರ ಹೇಳಿದರು.

ಪ್ರಚಾರ ಕಾರ್ಯದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚುನಾವಣಾ ಆಯೋಗವು ಇದೇ ರೀತಿ ಕೆಲಸವನ್ನು ಮುಂದುವರಿಸಿದರೆ ಪ್ರಜಾಪ್ರಭುತ್ವವು ಅಪಾಯಕ್ಕೀಡಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಮತದಾರರ ಪಟ್ಟಿ ಕೇವಲ ಒಂದು ಕಾಗದ ಎಂದು ಕೆಲವರು ಭಾವಿಸಿದ್ದಾರೆ. ‘ಬಹುಮತ ಪಡೆದಿದ್ದೇವೆ. ಆದ್ದರಿಂದ ನಾವೇ ಕಾನೂನುಗಳನ್ನು ರೂಪಿಸುತ್ತೇವೆ’ ಎಂಬುದು ಹೇಗೆ ಸ್ವೀಕಾರಾರ್ಹವಾಗುತ್ತದೆ? ನಮ್ಮದು ಬಹುಸಂಖ್ಯಾತ ರಾಷ್ಟ್ರವಲ್ಲದಿರಬಹುದು. ಆದರೆ, ಬಹುಭಾಷೀಯ, ಬಹುಸಂಸ್ಕೃತಿಯ ಮತ್ತು ಬಹುಧರ್ಮೀಯ ರಾಷ್ಟ್ರ’ ಎಂದು ಹೇಳಿದರು.

‘ಸಂವಿಧಾನವೂ ಯಾರಿಗೂ ಅಧಿಕಾರವನ್ನು ನೀಡುವುದಿಲ್ಲ. ಅಧಿಕಾರಕ್ಕೆ ಮಿತಿ ವಿಧಿಸುವುದು ಅದರ ಕರ್ತವ್ಯ. ಉತ್ತಮರ ಕೈಯಲ್ಲಿದ್ದರೆ ಮಾತ್ರ ಸಂವಿಧಾನದ ರಕ್ಷಣೆಯಾಗುತ್ತದೆ‘ ಎಂದರು.

ಸಲ್ವಾ ಜುಡುಮ್‌ ತೀರ್ಪಿನ ಕುರಿತು ಅಮಿತ್‌ ಶಾ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಸುದರ್ಶನ್‌ ಅವರು, ‘ಇದು ವೈಯಕ್ತಿಕ ತೀರ್ಪಲ್ಲ, ಸುಪ್ರೀಂ ಕೋರ್ಟ್‌ನ ತೀರ್ಪು. ಹೇಳಿಕೆಗಳನ್ನು ನೀಡುವ ಮೊದಲು ಶಾ ಅವರು ತೀರ್ಪನ್ನು ಸರಿಯಾಗಿ ಓದಿಕೊಳ್ಳಬೇಕು ಎಂದು ಸಲಹೆ ನೀಡಿದರು.

‘ಟೀಕೆಗಳ ಕಾರಣಕ್ಕೆ ನಾನು ಚುನಾವಣೆಯಿಂದ ಹಿಂದೆ ಸರಿಯುವುದಿಲ್ಲ, ವಿರೋಧಿಗಳ ಕಾರ್ಯತಂತ್ರವು ಫಲಿಸುವುದಿಲ್ಲ’ ಎಂದು ಎನ್‌ಡಿಎಂ ಮೈತ್ರಿಕೂಟಕ್ಕೆ ತಿರುಗೇಟು ನೀಡಿದರು..

‘ಮಾತನಾಡಿದರೆ ಚರ್ಚೆ ಸಾಧ್ಯವಾಗುತ್ತದೆ’

ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಸಿ.ಪಿ ರಾಧಾಕೃಷ್ಣನ್‌ ಅವರನ್ನು ಟೀಕಿಸಿದ ಸುದರ್ಶನ್‌ ‘ಯಾವುದೇ ಸಂವಾದ ಮತ್ತು ಚರ್ಚೆಯಲ್ಲಿ ನನ್ನ ಪ್ರತಿಸ್ಪರ್ಧಿ ಕಾಣಿಸುತ್ತಿಲ್ಲ’ ಎಂದರು. ‘ನಾನು ಪ್ರತಿದಿನ ಮಾಧ್ಯಮಗಳೊಂದಿಗೆ ಮಾತನಾಡುತ್ತೇನೆ. ಆದರೆ ನನ್ನ ಪ್ರತಿಸ್ಪರ್ಧಿ ಮಾತನಾಡುತ್ತಿಲ್ಲ. ಅವರು ಮಾತನಾಡಿದರೆ ಒಳ್ಳೆಯ ಚರ್ಚೆ ನಡೆಯಲು ಸಾಧ್ಯ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.