ರಾಹುಲ್ ಗಾಂಧಿ (ಸಂಗ್ರಹ ಚಿತ್ರ)
ಬೆಂಗಳೂರು: ಮಹಿಳೆಯೊಬ್ಬರು ಎರಡು ಬಾರಿ ಮತ ಚಲಾಯಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವಂತೆ ಸೂಚಿಸಿ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ, ರಾಹುಲ್ ಗಾಂಧಿ ಅವರಿಗೆ ಭಾನುವಾರ ನೋಟಿಸ್ ಜಾರಿ ಮಾಡಿದ್ದಾರೆ.
ದಾಖಲೆಗಳನ್ನು ಒದಗಿಸಿದರೆ ಚುನಾವಣಾ ಆಯೋಗವು ವಿವರವಾದ ತನಿಖೆ ನಡೆಸಲು ನೆರವಾಗಲಿದೆ ಎಂದು ಹೇಳಿದ್ದಾರೆ. ‘ಮತ ಕಳ್ಳತನ’ ಆರೋಪಿಸಿ ಕಳೆದ ವಾರ ನವದೆಹಲಿಯಲ್ಲಿ ನಡೆಸಿದ
ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಅವರು ಕೆಲವು ದಾಖಲೆಗಳನ್ನು ತೋರಿಸಿದ್ದರು.
‘ಚುನಾವಣಾಧಿಕಾರಿ ನೀಡಿದ ದಾಖಲೆಗಳ ಪ್ರಕಾರ, ಶಕುನ್ ರಾಣಿ ಎಂಬವರು ಎರಡು ಬಾರಿ ಮತ ಚಲಾಯಿಸಿದ್ದಾರೆ ಎಂದು ನೀವು ಹೇಳಿದ್ದೀರಿ. ನೀವು ಆರೋಪಿಸಿರುವಂತೆ ಶಕುನ್ ರಾಣಿ ಅವರು ಎರಡು ಬಾರಿ ಅಲ್ಲ, ಒಮ್ಮೆ ಮಾತ್ರ ಮತ ಚಲಾಯಿಸಿದ್ದಾರೆ ಎಂಬುದು ಪರಿಶೀಲನೆ ವೇಳೆ ನಮಗೆ ತಿಳಿದುಬಂದಿದೆ’ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ನೀವು ತೋರಿಸಿದ ‘ಟಿಕ್ ಮಾರ್ಕ್’ಮಾಡಿರುವ ದಾಖಲೆಯನ್ನು ಚುನಾವಣಾಧಿಕಾರಿ ನೀಡಿಲ್ಲ ಎಂಬುದು ಆಯೋಗ ನಡೆಸಿರುವ ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದುಬಂದಿದೆ ಎಂದು
ಉಲ್ಲೇಖಿಸಲಾಗಿದೆ.
‘ಆದ್ದರಿಂದ, ಶಕುನ್ ರಾಣಿ ಅಥವಾ ಬೇರೆ ಯಾರಾದರೂ ಎರಡು ಬಾರಿ ಮತ ಚಲಾಯಿಸಿದ್ದಾರೆ ಎಂದು ನೀವು ಹೇಳಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿದರೆ ನಾವು ವಿಸ್ತೃತ ತನಿಖೆ ನಡೆಸಬಹುದು’ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.