ADVERTISEMENT

ನಮೋ ಟಿವಿ ಪ್ರಸಾರಕ್ಕೂ ಚುನಾವಣಾ ಆಯೋಗ ತಡೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 13:20 IST
Last Updated 10 ಏಪ್ರಿಲ್ 2019, 13:20 IST
   

ನವದೆಹಲಿ: ಚುನಾವಣಾ ಆಯೋಗವು ನರೇಂದ್ರ ಮೋದಿ ಅವರ ಜೀವನ ಆಧರಿತ ಚಲನಚಿತ್ರ ‘ಪಿಎಂ ನರೇಂದ್ರ ಮೋದಿ’ ಬಿಡುಗಡೆಗೆ ತಡೆಯೊಡ್ಡುವುದರ ಜತೆಗೆ ನಮೋ ಟಿವಿ ಪ್ರಸಾರಕ್ಕೂ ತಡೆಯೊಡ್ಡಿದೆ ಎಂದು ಎನ್‍ಡಿಟಿವಿ ವರದಿ ಮಾಡಿದೆ.

ಯಾವುದೇ ರಾಜಕೀಯ ವ್ಯಕ್ತಿ ಅಥವಾ ರಾಜಕೀಯ ಪಕ್ಷದ ಉದ್ದೇಶಕ್ಕೆ ಇಂಬು ನೀಡುವ ಚಿತ್ರಗಳನ್ನು ಈ ಅವಧಿಯಲ್ಲಿ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಬಿಡುಗಡೆ ಮಾಡುವುದು ಸಲ್ಲದು ಎಂದ ಚುನಾವಣಾ ಆಯೋಗ, ಚುನಾವಣೆ ಮುಗಿಯುವವರೆಗೆ ಚಿತ್ರ ಬಿಡುಗಡೆ ಮಾಡುವಂತಿಲ್ಲ ಎಂದು ಹೇಳಿದೆ.

ಅದೇ ವೇಳೆ ಈ ತಡೆ ನಮೋ ಟಿವಿಗೂ ಅನ್ವಯವಾಗುತ್ತದೆ ಎಂದು ಆಯೋಗದ ಮೂಲಗಳು ಹೇಳಿರುವುದಾಗಿ ಎನ್‍ಡಿಟಿವಿ ವರದಿ ಮಾಡಿದೆ.
ನಮೋ ಟಿವಿ ಬಗ್ಗೆ ವಿಪಕ್ಷ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.ಚುನಾವಣಾ ಆಯೋಗದ ಕ್ರಮವನ್ನು ಸ್ವಾಗತಿಸಿದ ಕಾಂಗ್ರೆಸ್ ನಾಯಕ ಸಂಜಯ್ ಝಾ, ಚುನಾವಣಾ ಆಯೋಗ ಈ ನಿಲುವು ಸ್ವೀಕರಿಸಿದ್ದು ಖುಷಿಯಾಗಿದೆ. ಅಡಳಿತರೂಢ ಪಕ್ಷವೊಂದು ಈ ರೀತಿ ಪ್ರಚಾರದಲ್ಲಿ ತೊಡಗಿರುವುದು ನಾಚಿಕೆಗೇಡು ಎಂದಿದ್ದಾರೆ.

ಆದಾಗ್ಯೂ, ನಮೋ ಟಿವಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿಲ್ಲ ಎಂದು ಬಿಜೆಪಿ ಹೇಳಿದೆ. ಇದು ಸರ್ಕಾರಕ್ಕೆ ಆದ ಹಿನ್ನೆಡೆ ಎಂದು ನಾನು ಭಾವಿಸುತ್ತಿಲ್ಲ.ಇದರಲ್ಲಿ ಯಾವುದೇ ರೀತಿಯ ಕಾನೂನು ಉಲ್ಲಂಘನೆ ಆಗಿದೆ ಎಂದು ನನಗನಿಸುತ್ತಿಲ್ಲ.ಪ್ರಧಾನಿ ಮತ್ತು ಸರ್ಕಾರದ ಸಾಧನೆಯನ್ನು ಮಾತ್ರ ಇಲ್ಲಿ ತೋರಿಸಲಾಗಿದೆ. ನಾವು ಇದಕ್ಕೆ ಪರ್ಯಾಯ ಹುಡುಕುತ್ತಿದ್ದೇವೆ ಎಂದು ಬಿಜೆಪಿಯ ವಿವೇಕ್ ರೆಡ್ಡಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.