ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಸಿಇಸಿ ಜ್ಞಾನೇಶ್ ಕುಮಾರ್, ಪ್ರಧಾನಿ ನರೇಂದ್ರ ಮೋದಿ
ಕೃಪೆ: ಪಿಟಿಐ
ನವದೆಹಲಿ: ಬಿಹಾರದಲ್ಲಿ ಕೈಗೊಂಡಿದ್ದ ‘ಎಸ್ಐಆರ್’ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರು, ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದ ‘ನುಸುಳುಕೋರರು’ ಹಾಗೂ ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಾಡಿದ್ದ ‘ಮತ ಕಳವು’ ಆರೋಪಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ.
‘ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಹಾರಕ್ಕೆ ಭೇಟಿ ನೀಡಿದಾಗಲೆಲ್ಲಾ ನುಸುಳುಕೋರರ ಕುರಿತು ಪ್ರಸ್ತಾಪಿಸುತ್ತಿದ್ದರು. ಬಿಹಾರದಲ್ಲಿ ದೊಡ್ಡ ಸಂಖ್ಯೆಯಲ್ಲಿ ನುಸುಳುಕೋರರಿದ್ದು, ಅವರು ಮತ ಚಲಾಯಿಸುತ್ತಾರೆ ಎಂದು ಮೋದಿ ಹಾಗೂ ಶಾ ಹೇಳಿದ್ದಾರಲ್ಲ’ ಎಂದು ಪತ್ರಕರ್ತರು ಪ್ರಶ್ನಿಸಿದರು. ಇದಕ್ಕೆ ಸಿಇಸಿ ಉತ್ತರಿಸಲಿಲ್ಲ.
‘ಎಸ್‌ಐಆರ್ ವೇಳೆ ಎಷ್ಟು ಜನ ನುಸುಳುಕೋರರು ಪತ್ತೆಯಾಗಿದ್ದಾರೆ’ ಎಂಬ ಪ್ರಶ್ನೆಗೂ ಅವರು ಉತ್ತರಿಸಲಿಲ್ಲ.
‘ಮತ ಕಳವು’ ಕುರಿತು ರಾಹುಲ್ ಗಾಂಧಿ ಮಾಡುತ್ತಿರುವ ಆರೋಪಗಳ ಕುರಿತ ಮತ್ತೊಂದು ಪ್ರಶ್ನೆಗೂ ಸಿಇಸಿ ಪ್ರತಿಕ್ರಿಯೆ ನೀಡಲಿಲ್ಲ.
ಆದರೆ, ‘ಮುಜಫ್ಫರಪುರದ ನಿರ್ದಿಷ್ಟ ಮತಗಟ್ಟೆಯೊಂದರ ಮತದಾರರ ಪಟ್ಟಿಯಲ್ಲಿ ಒಂದೇ ಸಮುದಾಯಕ್ಕೆ ಸೇರಿದ 100ಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಸೇರ್ಪಡೆ ಮಾಡಿರುವ ಕುರಿತು ತನಿಖೆ ನಡೆಸಬೇಕು’ ಎಂದು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಬಿಹಾರದ ಮುಖ್ಯ ಚುನಾವಣಾ ಅಧಿಕಾರಿ ವಿನೋದ್ ಗುಂಜ್ಯಾಲ್ ಅವರಿಗೆ ಸೂಚಿಸಿದರು.
‘ಅನೇಕ ಮತದಾರರಿಗೆ ಮನೆ ಇಲ್ಲ. ಇಂಥ ಸಂದರ್ಭಗಳಲ್ಲಿ, ನೆರೆ ಮನೆಯ ಸಂಖ್ಯೆಯನ್ನು ಇಂತಹ ಮತದಾರರಿಗೆ ಹಂಚಿಕೆ ಮಾಡಲಾಗುತ್ತದೆ. ಹೀಗಾಗಿ, ಒಂದು ಮನೆಯಲ್ಲಿ ಅನೇಕ ಮತದಾರರು ಕಂಡುಬರುವ ಸಾಧ್ಯತೆ ಹೆಚ್ಚು’ ಎಂದು ಅವರು ಕಾಂಗ್ರೆಸ್ ಪಕ್ಷದ ನಿಯೋಗ ಎತ್ತಿದ್ದ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.