ADVERTISEMENT

ನವಜೋತ್‌ ಸಿಧು ವಿರುದ್ಧ ಗೆದ್ದ ಎಎಪಿಯ ‘ಪ್ಯಾಡ್‌ ವುಮನ್‌ ಆಫ್‌ ಪಂಜಾಬ್‌’

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಮಾರ್ಚ್ 2022, 13:17 IST
Last Updated 10 ಮಾರ್ಚ್ 2022, 13:17 IST
ನವಜೋತ್‌ ಸಿಧು
ನವಜೋತ್‌ ಸಿಧು   

ಅಮೃತಸರ: ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಸ್ಪಷ್ಟ ಬಹುಮತದತ್ತ ಮುನ್ನುಗ್ಗುತ್ತಿದೆ. ಕಾಂಗ್ರೆಸ್‌ ಹಾಗೂ ಅಕಾಲಿದಳದ ಪ್ರಮುಖ ನಾಯಕರು ಎಎಪಿ ವಿರುದ್ಧ ಸೋಲು ಅನುಭವಿಸಿದ್ದಾರೆ.

ಅಮೃತಸರ ಪೂರ್ವ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಸೋಲು ಅನುಭವಿಸಿರುವುದು ಪಕ್ಷಕ್ಕೆ ದೊಡ್ಡ ಮಟ್ಟದ ಹಿನ್ನಡೆಯಾಗಿದೆ.

ನವಜೋತ್‌ ಸಿಧು ಮತ್ತು ಶಿರೋಮಣಿ ಅಕಾಲಿದಳದ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ ನಡುವೆ ತೀವ್ರ ಪೈಪೋಟಿ ಇದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಅಚ್ಚರಿಯ ಬೆಳವಣಿಗೆಯಲ್ಲಿ ಈ ಇಬ್ಬರನ್ನೂ ಸೋಲಿಸಿ ಎಎಪಿಯ ಜೀವನ್‌ ಜ್ಯೋತ್‌ ಕೌರ್‌ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ.

ADVERTISEMENT

ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಜೀವನ್ ಜ್ಯೋತ್ ಒಟ್ಟು 39,679 ಮತಗಳನ್ನು ಗಳಿಸಿದರೆ, ಸಿಧು 32,929 ಮತ್ತು ಮಜಿಥಿಯಾ 25,188 ಮತಗಳನ್ನು ಪಡೆದಿದ್ದಾರೆ.

ಜೀವನ್ ಜ್ಯೋತ್ ಕೌರ್ ಸಾಮಾಜಿಕ ಕಾರ್ಯಕರ್ತೆಯಾಗಿ ಸಕ್ರಿಯರಾಗಿದ್ದಾರೆ. ಅವರು ಪಂಜಾಬ್‌ನ ಗ್ರಾಮೀಣ ಪ್ರದೇಶಗಳಲ್ಲಿನ ಮಹಿಳೆಯರಿಗೆ ಪ್ಲಾಸ್ಟಿಕ್ ಸ್ಯಾನಿಟರಿ ಪ್ಯಾಡ್‌ಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಅವರನ್ನು ‘ಪ್ಯಾಡ್‌ ವುಮನ್‌ ಆಫ್‌ ಪಂಜಾಬ್‌’ ಎಂದು ಕರೆಯಲಾಗುತ್ತದೆ.

117 ಸದಸ್ಯ ಬಲದ ಪಂಜಾಬ್ ವಿಧಾನಸಭೆಯಲ್ಲಿ ಆಮ್ ಆದ್ಮಿ ಪಕ್ಷವು 91 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಈ ಮೂಲಕ ಅಧಿಕಾರಕ್ಕೇರುವುದು ಬಹುತೇಕ ಖಚಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.