ADVERTISEMENT

ಮಾಲಿನ್ಯ | ಗೆಲುವಿನ ಸಂಭ್ರಮಕ್ಕೆ ಪಟಾಕಿ ಸಿಡಿಸಬೇಡಿ: ಕಾರ್ಯಕರ್ತರಿಗೆ ಕೇಜ್ರಿವಾಲ್

ಪಿಟಿಐ
Published 11 ಫೆಬ್ರುವರಿ 2020, 4:30 IST
Last Updated 11 ಫೆಬ್ರುವರಿ 2020, 4:30 IST
ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್   

ನವದೆಹಲಿ: ಚುನಾವಣಾ ಸಮೀಕ್ಷೆಗಳು ಆಮ್ ಆದ್ಮೀ ಪಾರ್ಟಿ ವಿಜಯವನ್ನು ಖಚಿತಪಡಿಸಿದ ಬೆನ್ನಿಗೇ, ವಿಜಯೋತ್ಸವ ಆಚರಿಸಲು ಪಟಾಕಿಗಳನ್ನು ಸಿಡಿಸದಂತೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಿರುವ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಈ ಕ್ರಮಕ್ಕೆ ಮುಂದಾಗಿದ್ದಾರೆ.

ಚುನಾವಣಾ ವಿಜಯೋತ್ಸವಕ್ಕೆ ಸೋಮವಾರದಿಂದಲೇ ಕಾರ್ಯಕರ್ತರು ಭರ್ಜರಿ ತಯಾರಿ ನಡೆಸಿದ್ದು, ಮಂಗಳವಾರ ಆರಂಭದಿಂದಲೇ ಆಮ್ ಆದ್ಮೀ ಪಾರ್ಟಿಯು ಮುನ್ನಡೆ ಕಾಯ್ದುಕೊಂಡು, ಅಧಿಕಾರ ಮರುಸ್ಥಾಪನೆಗೆ ಸಿದ್ಧವಾಗಿತ್ತು. ಈಗಾಗಲೇ ವಾಯು ಮಾಲಿನ್ಯ ಸಮಸ್ಯೆಯಿಂದ ಬಳಲುತ್ತಿರುವ ರಾಜಧಾನಿಯ ಪ್ರದೂಷಣೆಗೆ ಮತ್ತಷ್ಟು ಮಾಲಿನ್ಯ ಸೇರಿಸಬಾರದೆಂಬ ಕಾರಣಕ್ಕೆ ಪಟಾಕಿ ಸಿಡಿಸದಂತೆ ಕೇಜ್ರಿವಾಲ್ ಸೂಚಿಸಿದ್ದರು.

ಸಿಹಿತಿನಸು ಮತ್ತು ನಮ್‌ಕೀನ್ (ಖಾರ ತಿಂಡಿ) ತಯಾರಿಗೆ ಸೋಮವಾರದಿಂದಲೇ ಚಾಲನೆ ದೊರೆತಿದ್ದು, ಐಟಿಒದಲ್ಲಿ ಆಪ್ ಮುಖ್ಯ ಕಚೇರಿಯಲ್ಲಿ ಎಲ್ಲ ರೀತಿಯ ಸಿದ್ಧತೆ ನಡೆದಿತ್ತು.

ADVERTISEMENT

ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮೀ ಪಾರ್ಟಿಗೆ ಭರ್ಜರಿ ವಿಜಯ ದೊರೆಯಲಿದೆ ಎಂದು ಬಹುತೇಕ ಚುನಾವಣೋತ್ತರ ಸಮೀಕ್ಷೆಗಳೂ ಭವಿಷ್ಯ ನುಡಿದಿದ್ದವು. 2015ರಲ್ಲಿ 67 ಸ್ಥಾನಗಳನ್ನು ಆಮ್ ಆದ್ಮೀ ಪಾರ್ಟಿ ಗೆದ್ದಿದ್ದರೆ, ಬಿಜೆಪಿ ಕೇವಲ 3 ಸ್ಥಾನಗಳನ್ನು ಗಳಿಸಿತ್ತು. ಕಾಂಗ್ರೆಸ್ ಇಲ್ಲಿ ಶೂನ್ಯ ಸಂಪಾದನೆಯಾಗಿತ್ತು. ಈ ಬಾರಿ ಆಮ್ ಆದ್ಮೀ ಪಾರ್ಟಿಯ ಮತ ಬ್ಯಾಂಕ್‌ಗೆ ಸ್ವಲ್ಪ ಮಟ್ಟಿನ ಆಘಾತ ನೀಡುವಲ್ಲಿ ಬಿಜೆಪಿ ಸಫಲವಾಗಿದ್ದು, 70 ಸದಸ್ಯ ಬಲದ ದೆಹಲಿ ವಿಧಾನಸಭೆಯಲ್ಲಿ ತನ್ನ ಸ್ಥಾನಗಳ ಸಂಖ್ಯೆಯನ್ನು ಎರಡಂಕಿಗೆ ಏರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಮಾಲಿನ್ಯ ತಗ್ಗಿಸುವುದು ಆಮ್ ಆದ್ಮೀ ಪಕ್ಷದ ಚುನಾವಣಾ ಪ್ರಣಾಳಿಕೆಯ ಭಾಗವೂ ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.