ADVERTISEMENT

ರಾಜ್ಯಸಭೆಯ 57 ಸ್ಥಾನಗಳಿಗೆ ಚುನಾವಣೆ ನಿಗದಿ: ಚುನಾವಣಾ ಆಯೋಗ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಮೇ 2022, 10:46 IST
Last Updated 12 ಮೇ 2022, 10:46 IST
ರಾಜ್ಯಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ 
ರಾಜ್ಯಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌    

ನವದೆಹಲಿ: ರಾಜ್ಯಸಭೆಯ 57 ಸ್ಥಾನಗಳಿಗೆ ಜೂನ್‌ 10ರಂದು ಚುನಾವಣೆ ನಿಗದಿ ಪಡಿಸಿರುವುದಾಗಿ ಚುನಾವಣಾ ಆಯೋಗ ಗುರುವಾರ ಪ್ರಕಟಿಸಿದೆ.

ಹದಿನೈದು ರಾಜ್ಯಗಳ 57 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 2022ರ ಜೂನ್‌–ಆಗಸ್ಟ್‌ ನಡುವೆ 57 ಸಂಸದರ ಸ್ಥಾನ ತೆರವಾಗಲಿವೆ.

ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ನಿರ್ಮಲಾ ಸೀತಾರಾಮನ್‌, ಜೈರಾಮ್‌ ರಮೇಶ್‌, ಕೆ.ಸಿ.ರಾಮಮೂರ್ತಿ ಹಾಗೂ ದಿವಂಗತ ಆಸ್ಕರ್‌ ಫರ್ನಾಂಡಿಸ್‌ (2021ರ ಸೆಪ್ಟೆಂಬರ್‌ನಿಂದ ತೆರವು) ಸೇರಿ ನಾಲ್ಕು ಸ್ಥಾನಗಳು ಜೂನ್‌ 30ರಂದು ತೆರವಾಗಲಿವೆ. ಉತ್ತರ ಪ್ರದೇಶದಿಂದ ಅತಿ ಹೆಚ್ಚು, 11 ಸಂಸದರು ನಿವೃತ್ತರಾಗಲಿದ್ದಾರೆ.

ADVERTISEMENT

ಚುನಾವಣೆ ನಡೆಯಲಿರುವ ಜೂನ್‌ 10ರಂದು ಸಂಜೆ 5ಕ್ಕೆ ಮತ ಎಣಿಕೆ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಮೇ 31 ಕೊನೆಯ ದಿನವಾಗಿದೆ.

ರಾಜ್ಯಸಭೆಯ ಸ್ಥಾನಗಳು ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರಮುಖ ಪಾತ್ರವಹಿಸಲಿವೆ. ಲೋಕಸಭೆ ಮತ್ತು ರಾಜ್ಯಸಭೆಯ ಒಟ್ಟು 776 ಸಂಸದರು, ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 4,120 ಶಾಸಕರು ರಾಷ್ಟ್ರಪತಿ ಆಯ್ಕೆಗೆ ಮತದಾನ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.