ADVERTISEMENT

ಚುನಾವಣಾ ಬಾಂಡ್ | ಬಿಜೆಪಿಯ ಭ್ರಷ್ಟಾಚಾರದ ಕುಟಿಲತಂತ್ರ ಬಯಲು– ಕಾಂಗ್ರೆಸ್

ಪಿಟಿಐ
Published 15 ಮಾರ್ಚ್ 2024, 14:38 IST
Last Updated 15 ಮಾರ್ಚ್ 2024, 14:38 IST
ಕಾಂಗ್ರೆಸ್
ಕಾಂಗ್ರೆಸ್   

ನವದೆಹಲಿ: ಚುನಾವಣಾ ಬಾಂಡ್ ಯೋಜನೆಯು ಅಸ್ತಿತ್ವದಲ್ಲಿಯೇ ಇಲ್ಲದ ಕಂಪನಿಗಳ ಹೆಸರಿನಲ್ಲಿ ಅಕ್ರಮ ಹಣ ವರ್ಗಾವಣೆ ಮತ್ತು ಕಂಪನಿಗಳಿಗೆ ರಕ್ಷಣೆ ಒದಗಿಸುವ ಅಭಯದೊಂದಿಗೆ ಲಂಚ ಪಡೆಯುವ ಕುಟಿಲನೀತಿ ಇದಾಗಿದೆ ಎಂದು ಕಾಂಗ್ರೆಸ್ ಪಕ್ಷ ಟೀಕಿಸಿದೆ. 

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ‘ಇ.ಡಿ, ಸಿಬಿಐ ದಾಳಿಗೂ ಬಾಂಡ್‌ ದೇಣಿಗೆಗೂ ಸಂಬಂಧವಿದೆ ಎಂಬ ಹೇಳಿಕೆಗಳು ಊಹಾತ್ಮಕ’ ಎಂಬ ಹೇಳಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ವಿರುದ್ಧವೂ ಹರಿಹಾಯ್ದರು. ‘ಯಾವ ಪಕ್ಷಕ್ಕೆ ಎಷ್ಟು ದೇಣಿಗೆ ಸಂದಾಯವಾಗಿದೆ ಎಂಬ ಪೂರ್ಣ ವಿವರಗಳನ್ನು ಅವರೇ ಬಹಿರಂಗಪಡಿಸಲಿ’ ಎಂದು ಸವಾಲೆಸೆದರು.

‘ಈಗ ಚುನಾವಣಾ ಬಾಂಡ್‌ಗಳ ವಿಶೇಷ ಗುರುತು ಸಂಖ್ಯೆಯನ್ನೂ ಬಹಿರಂಗಪಡಿಸಬೇಕು. ಇದು, ಬಾಂಡ್‌ಗಳ ಮೂಲಕ ನೆರವು ನೀಡಿದ ದೇಣಿಗೆದಾರರು ಹಾಗೂ ಅದನ್ನು ಸ್ವೀಕರಿಸಿದವರ ಪರಸ್ಪರ ಹೋಲಿಕೆಗೆ ನೆರವಾಗಲಿದೆ‘ ಎಂದು ಅಭಿಪ್ರಾಯಪಟ್ಟರು.

ADVERTISEMENT

ಎಸ್‌ಬಿಐ ಬಿಡುಗಡೆ ಮಾಡಿರುವ ಚುನಾವಣಾ ಬಾಂಡ್‌ಗಳ ವಿವರಗಳನ್ನು ‘ಎಕ್ಸ್’ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ‘1,300ಕ್ಕೂ ಹೆಚ್ಚು ಕಂಪನಿಗಳು, ವ್ಯಕ್ತಿಗಳು ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ನೀಡಿದ್ದಾರೆ. ಈ ಮೂಲಕ 2019ರಿಂದ ಇಲ್ಲಿಯವರೆಗೂ ಬಿಜೆಪಿಗೇ 6,000ಕ್ಕೂ ಅಧಿಕ ಕೋಟಿ ಸಂದಾಯವಾಗಿದೆ’ ಎಂದಿದ್ದಾರೆ.

ಎಸ್‌ಬಿಐ ಈಗ ಏಪ್ರಿಲ್‌ 2019ರ ನಂತರದ ವಿವರ ಹಂಚಿಕೊಂಡಿದೆ. ಆದರೆ, ಬ್ಯಾಂಕ್‌ ಮಾರ್ಚ್ 2018ರಿಂದಲೇ ಬಾಂಡ್‌ ವಿತರಿಸುತ್ತಿದೆ. ಆ ಪ್ರಕಾರ, ₹ 2,500 ಕೋಟಿ ಮೊತ್ತದ ಬಾಂಡ್‌ಗಳ ವಿವರ ನಾಪತ್ತೆಯಾಗಿದೆ. ಮಾರ್ಚ್‌ 2018ರಿಂದ ಏಪ್ರಿಲ್‌ 2019ರವರೆಗಿನ ಅವಧಿಯಲ್ಲಿ ಶೇ 95ರಷ್ಟು ಬಿಜೆಪಿಗೇ ಸಂದಾಯವಾಗಿದೆ. ಇಲ್ಲಿ ಯಾರನ್ನು ರಕ್ಷಿಸಲಾಗುತ್ತಿದೆ?’ ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.