ADVERTISEMENT

ಎಲೆಕ್ಟ್ರಿಕ್‌ ವಾಹನಗಳಿಗೆ ಬೆಂಕಿ: ಸಚಿವ ಗಡ್ಕರಿ ಎಚ್ಚರಿಕೆ 

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಏಪ್ರಿಲ್ 2022, 15:36 IST
Last Updated 21 ಏಪ್ರಿಲ್ 2022, 15:36 IST
ನಿತಿನ್‌ ಗಡ್ಕರಿ
ನಿತಿನ್‌ ಗಡ್ಕರಿ    

ನವದೆಹಲಿ: ಎಲೆಕ್ಟ್ರಿಕ್ ವಾಹನಗಳಿಗೆ ಬೆಂಕಿ ಹೊತ್ತಿಕೊಂಡ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ, ಸುರಕ್ಷತಾ ಮಾನದಂಡಗಳನ್ನು ಅಳವಡಿಸಿಕೊಳ್ಳುವಲ್ಲಿ ನಿರ್ಲಕ್ಷ್ಯ ತೋರಿದರೆ ಎಲೆಕ್ಟ್ರಿಕ್ ವಾಹನ ತಯಾರಕರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಗುರುವಾರ ಎಚ್ಚರಿಸಿದ್ದಾರೆ.

‘ಯಾವುದೇ ಕಂಪನಿಯು ತಮ್ಮ ಪ್ರಕ್ರಿಯೆಗಳಲ್ಲಿ ನಿರ್ಲಕ್ಷ್ಯ ತೋರಿದರೆ ಭಾರೀ ದಂಡವನ್ನು ವಿಧಿಸಲಾಗುತ್ತದೆ. ಎಲ್ಲಾ ದೋಷಯುಕ್ತ ವಾಹನಗಳನ್ನು ಹಿಂಪಡೆಯಲು ಆದೇಶಿಸಬೇಕಾಗುತ್ತದೆ’ ಎಂದು ಗಡ್ಕರಿ ಟ್ವೀಟ್ ಮಾಡಿದ್ದಾರೆ.

ಪ್ರತಿಯೊಬ್ಬ ಪ್ರಯಾಣಿಕರ ಸುರಕ್ಷತೆಗೆ ಸರ್ಕಾರ ಬದ್ಧವಾಗಿರಲಿದೆ ಎಂದು ಗಡ್ಕರಿ ಸ್ಪಷ್ಟಪಡಿಸಿದ್ದಾರೆ.

ADVERTISEMENT

‘ದೋಷಯುಕ್ತ ವಾಹನಗಳನ್ನು ತಕ್ಷಣವೇ ಹಿಂಪಡೆಯಲು ಕಂಪನಿಗಳು ಕ್ರಮ ಕೈಗೊಳ್ಳಬಹುದು’ ಎಂದೂ ಅವರು ಸಲಹೆ ನೀಡಿದ್ದಾರೆ.

‘ಎಲೆಕ್ಟ್ರಿಕ್‌ ವಾಹನಗಳಿಗೆ ಸಂಬಂಧಿಸಿದ ಹಲವು ಅವಘಡಗಳು ಕಳೆದ ಎರಡು ತಿಂಗಳುಗಳಲ್ಲಿ ಬೆಳಕಿಗೆ ಬಂದಿವೆ. ಈ ಘಟನೆಗಳಲ್ಲಿ ಕೆಲವರು ಪ್ರಾಣ ಕಳೆದುಕೊಂಡಿರುವುದು ಮತ್ತು ಹಲವರು ಗಾಯಗೊಂಡಿರುವುದು ಅತ್ಯಂತ ದುರದೃಷ್ಟಕರ’ ಎಂದೂ ಸಚಿವರು ಹೇಳಿದರು.

ಘಟನೆಗಳ ಬಗ್ಗೆ ತನಿಖೆ ನಡೆಸಲು ಮತ್ತು ಭವಿಷ್ಯದಲ್ಲಿ ಇಂತಹ ಪ್ರಕರಣಗಳು ಸಂಭವಿಸದಂತೆ ತಡೆಯಲು/ ಶಿಫಾರಸುಗಳನ್ನು ಮಾಡಲು ರಸ್ತೆ ಸಾರಿಗೆ ಸಚಿವಾಲಯ ಈಗಾಗಲೇ ತಜ್ಞರ ತಂಡವನ್ನು ರಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.