ADVERTISEMENT

'The Emergency Diaries' ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಅನುಭವ ಹಂಚಿದ ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಜೂನ್ 2025, 5:24 IST
Last Updated 25 ಜೂನ್ 2025, 5:24 IST
<div class="paragraphs"><p>'ದಿ ಎಮರ್ಜನ್ಸಿ ಡೈರೀಸ್' ಪುಸ್ತಕ</p></div>

'ದಿ ಎಮರ್ಜನ್ಸಿ ಡೈರೀಸ್' ಪುಸ್ತಕ

   

(ಚಿತ್ರ ಕೃಪೆ: X/@BlueKraft)

ನವದೆಹಲಿ: ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಾಗಿ 50 ವರ್ಷಗಳ ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತುರ್ತು ಕಾಲಘಟ್ಟದಲ್ಲಿನ ತಮ್ಮ ಅನುಭವಗಳನ್ನು ವಿವರಿಸುವ ಹೊಸ ಪುಸ್ತಕವನ್ನು ಪರಿಚಯಿಸಿದ್ದಾರೆ.

ADVERTISEMENT

'The Emergency Diaries - Years that Forged a Leader' ಪುಸ್ತಕವನ್ನು 'ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಷನ್' ಪ್ರಕಟಿಸಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು (ಬುಧವಾರ) ಬಿಡುಗಡೆಗೂಳಿಸಲಿದ್ದಾರೆ. ಈ ಪುಸ್ತಕದ ಮುನ್ನುಡಿಯನ್ನು ಭಾರತದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಬರೆದಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್‌'ನಲ್ಲಿ ಬರೆದುಕೊಂಡಿರುವ ಪ್ರಧಾನಿ ಮೋದಿ, 'ತುರ್ತು ಪರಿಸ್ಥಿತಿ ಹೇರಿಕೆಯಾದಾಗ ನಾನು ಆರ್‌ಎಸ್‌ಎಸ್ ಪ್ರಚಾರಕ ಆಗಿದ್ದೆ. ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟವು ನನ್ನ ಪಾಲಿಗೆ ಕಲಿಕಾ ಕಾಲಘಟ್ಟವಾಗಿತ್ತು. ಅದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರಕ್ಷಿಸುವ ಪ್ರಾಮುಖ್ಯತೆಯನ್ನು ಪುನರುಚ್ಚರಿಸಿತು' ಎಂದು ಹೇಳಿದ್ದಾರೆ.

'ಅದೇ ಸಮಯದಲ್ಲಿ ರಾಜಕೀಯ ರಂಗದ ನಾಯಕರಿಂದ ನಾನು ಬಹಳಷ್ಟು ಕಲಿಯಲು ಸಾಧ್ಯವಾಯಿತು. ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಷನ್ ಅವುಗಳಲ್ಲಿ ಕೆಲವು ಅನುಭವಗಳನ್ನು ಪುಸ್ತಕದ ರೂಪದಲ್ಲಿ ಸಂಗ್ರಹಿಸಿದೆ ಎಂದು ಹೇಳಲು ಖುಷಿಯಾಗುತ್ತಿದೆ. ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡಿದ್ದ ನಾಯಕರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಇದಕ್ಕೆ ಮುನ್ನುಡಿ ಬರೆದಿದ್ದಾರೆ' ಎಂದು ಉಲ್ಲೇಖಿಸಿದ್ದಾರೆ.

'ದಿ ಎಮರ್ಜನ್ಸಿ ಡೈರೀಸ್' ಪುಸ್ತಕವು ತುರ್ತು ಪರಿಸ್ಥಿತಿ ಕಾಲಘಟ್ಟದಲ್ಲಿನ ನನ್ನ ಪ್ರಯಾಣವನ್ನು ವಿವರಿಸುತ್ತದೆ. ಈ ಪುಸ್ತಕದ ಮೂಲಕ ಆ ಕಾಲದ ಹಲವು ನೆನಪುಗಳು ಮರುಕಳಿಸಿವೆ' ಎಂದಿದ್ದಾರೆ.

'ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ನೆನಪಿಸಿಕೊಳ್ಳುವವರು ಮತ್ತು ಆ ಸಮಯದಲ್ಲಿ ಬಳಲಿದ ಕುಟುಂಬದವರು ತಮ್ಮ ಅನುಭವಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಬೇಕೆಂದು ನಾನು ವಿನಂತಿಸುತ್ತೇನೆ. ಇದು 1975ರಿಂದ 1977ರವರೆಗಿನ ಅವಮಾನಕರ ಅವಧಿಯ ಕುರಿತು ಯುವಜನತೆಯಲ್ಲಿ ಜಾಗೃತಿಯನ್ನು ಮೂಡಿಸಲಿದೆ' ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.