ADVERTISEMENT

ಖ್ಯಾತ ಖಭೌತ ವಿಜ್ಞಾನಿ, ಬರಹಗಾರ ಜಯಂತ್ ನಾರ್ಲಿಕರ್ ನಿಧನ

ಪಿಟಿಐ
Published 20 ಮೇ 2025, 8:00 IST
Last Updated 20 ಮೇ 2025, 8:00 IST
<div class="paragraphs"><p>ಜಯಂತ್ ನಾರ್ಲಿಕರ್</p></div>

ಜಯಂತ್ ನಾರ್ಲಿಕರ್

   

Source: Facebook/Krishna Kumar

ಮುಂಬೈ: ಖ್ಯಾತ ಖಭೌತವಿಜ್ಞಾನಿ ಮತ್ತು ಲೇಖಕ ಜಯಂತ್ ನಾರ್ಲಿಕರ್ (86) ಅವರು ಮಂಗಳವಾರ ಇಲ್ಲಿ ನಿಧನರಾಗಿದ್ದಾರೆ.

ADVERTISEMENT

ಅವರಿಗೆ ಮೂವರು ಪುತ್ರಿಯರು ಇದ್ದಾರೆ. ನಾರ್ಲಿಕರ್ ಅವರು ಖಭೌತ ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಅಸಾಧಾರಣ ಕೊಡುಗೆಗಳು, ವಿಜ್ಞಾನವನ್ನು ಜನಪ್ರಿಯಗೊಳಿಸಲು ಮತ್ತು ದೇಶದಲ್ಲಿ ಮೊದಲ ಹಂತದ ಸಂಶೋಧನಾ ಸಂಸ್ಥೆಗಳನ್ನು ಸ್ಥಾಪಿಸಲು ಶ್ರಮಿಸುವ ಮೂಲಕ ಅಪಾರ ಮನ್ನಣೆ ಗಳಿಸಿದ್ದರು. 

ಕುಟುಂಬದ ಮೂಲಗಳ ಪ್ರಕಾರ, ನಾರ್ಲಿಕರ್ ಅವರು ಮಂಗಳವಾರ ಬೆಳಿಗ್ಗೆ ನಿದ್ರೆಯಲ್ಲಿರುವಾಗಲೇ ನಿಧನ ಹೊಂದಿದ್ದಾರೆ. ನಾರ್ಲಿಕರ್ ಅವರು ಇತ್ತೀಚೆಗೆ ನಗರದ ಆಸ್ಪತ್ರೆಯಲ್ಲಿ ಹಿಪ್‌ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

1938ರ ಜುಲೈ 19ರಂದು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಜನಿಸಿದ ನಾರ್ಲಿಕರ್ ಅವರು ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ (ಬಿಎಚ್‌ಯು) ಆರಂಭಿಕ ಶಿಕ್ಷಣ, ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯದಿಂದ ಉನ್ನತ ಶಿಕ್ಷಣ ಪಡೆದಿದ್ದರು. ಬ್ರಿಟನ್‌ನಲ್ಲಿ ಡಾಕ್ಟರೇಟ್‌ ಮಾಡುವಾಗ ಅವರ ಮಾರ್ಗದರ್ಶಕರಾದ ಪ್ರಸಿದ್ಧ ವಿಜ್ಞಾನಿ ಫ್ರೆಡ್ ಹೋಯ್ಲ್ ಅವರೊಂದಿಗೆ ಗುರುತ್ವಾಕರ್ಷಣೆ ಕುರಿತು ತಮ್ಮದೇ ಸಿದ್ಧಾಂತ ಸಿದ್ಧಪಡಿಸಿದ್ದರು. ಈ ಸಿದ್ಧಾಂತವು ‘ಹೋಯ್ಲ್-ನಾರ್ಲಿಕರ್ ಸಿದ್ಧಾಂತ’ವೆಂದೇ ಹೆಸರಾಗಿದೆ. 

ಟಾಟಾ ಇನ್ಸ್‌ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ (1972-1989) ಸೇರುವ ಉದ್ದೇಶದಿಂದ ಭಾರತಕ್ಕೆ ಮರಳಿದರು. 1988ರಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗವು ಅವರನ್ನು ಇಂಟರ್‌ ಯುನಿವರ್ಸಿಟಿ ಸೆಂಟರ್‌ ಫಾರ್‌ ಅಸ್ಟ್ರೋನಮಿ ಆ್ಯಂಡ್‌ ಆಸ್ಟ್ರೋಫಿಸಿಕ್ಸ್‌ (ಐಯುಸಿಎಎ) ಸಂಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಿತ್ತು. 2003ರಲ್ಲಿ ನಿವೃತ್ತಿಯಾದರು.

ನಾರ್ಲಿಕರ್‌ ಅವರಿಗೆ ಪದ್ಮಭೂಷಣ (1965), ಪದ್ಮವಿಭೂಷಣ (2004), ಮಹಾರಾಷ್ಟ್ರ ಭೂಷಣ ಪ್ರಶಸ್ತಿ (2011) ನೀಡಿ ಗೌರವಿಸಲಾಗಿದೆ. ಅವರ ಆತ್ಮಚರಿತ್ರೆಯ ಪುಸ್ತಕಕ್ಕೆ (ಮರಾಠಿ) 2014ರಲ್ಲಿ ‍ಪ್ರಾದೇಶಿಕ ಭಾಷೆಯ ವಿಭಾಗದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಸಂದಿದೆ. 2021ರ ಜನವರಿಯಲ್ಲಿ ನಾಸಿಕ್‌ನಲ್ಲಿ ನಡೆದ 94ನೇ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಕೂಡ ವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.