ADVERTISEMENT

ಕೆಲಸ ಕಳೆದುಕೊಂಡ ಕಾರ್ಮಿಕರು ಶೇ 72

ಕರ್ನಾಟಕದಲ್ಲಿ ಲಾಕ್‌ಡೌನ್‌ ಪರಿಣಾಮ: ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸಮೀಕ್ಷೆ

ಪಿಟಿಐ
Published 28 ಮೇ 2020, 18:29 IST
Last Updated 28 ಮೇ 2020, 18:29 IST
ವಲಸೆ ಕಾರ್ಮಿಕರು (ಪ್ರಾತಿನಿಧಿಕ ಚಿತ್ರ)
ವಲಸೆ ಕಾರ್ಮಿಕರು (ಪ್ರಾತಿನಿಧಿಕ ಚಿತ್ರ)   

ಬೆಂಗಳೂರು: ಕೋವಿಡ್‌ ತಡೆ ಕಾರಣಕ್ಕಾಗಿ ಹೇರಲಾದ ಲಾಕ್‌ಡೌನ್‌ನಿಂದ ಕೆಲಸ ಕಳೆದುಕೊಂಡಿದ್ದೇವೆ ಎಂದು ಕರ್ನಾಟಕದ 10ರಲ್ಲಿ ಏಳು (ಶೇ 72) ಕಾರ್ಮಿಕರು ಹೇಳಿದ್ದಾರೆ. ಅಜೀಮ್‌ ಪ್ರೇಮ್‌ಜಿ ವಿಶ್ವವಿದ್ಯಾಲಯ ಮತ್ತು ಇತರ ಹತ್ತು ಸಂಘಟನೆಗಳು ಜತೆಯಾಗಿ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ತಿಳಿದು ಬಂದಿದೆ.

ಸ್ವ ಉದ್ಯೋಗಿಗಳು, ಕೂಲಿ ಕಾರ್ಮಿಕರು, ಕಾಯಂ ಕಾರ್ಮಿಕರು ಮುಂತಾದವರನ್ನು ದೂರವಾಣಿ ಮೂಲಕ ಮಾತನಾಡಿಸಿ ಸಮೀಕ್ಷೆ ನಡೆಸಲಾಗಿದೆ. 12 ರಾಜ್ಯಗಳ ಐದು ಸಾವಿರ ಮಂದಿ ಸಮೀಕ್ಷೆಯಲ್ಲಿ ಭಾಗಿಯಾಗಿದ್ದಾರೆ. ಕರ್ನಾಟಕಕ್ಕೆ ಸಂಬಂಧಿಸಿದ ಸಮೀಕ್ಷೆಯ ಅಂಕಿ ಅಂಶಗಳನ್ನು ಗುರುವಾರ ಬಿಡುಗಡೆ ಮಾಡಲಾಗಿದೆ.

ಬಹುಸಂಖ್ಯೆಯ ಜನರು ಕೆಲಸ ಕಳೆದುಕೊಂಡಿದ್ದಾರೆ. ಕೃಷಿಯೇತರ ಕ್ಷೇತ್ರಗಳಲ್ಲಿ ಸ್ವ ಉದ್ಯೋಗಿಗಳಾಗಿದ್ದವರು ಮತ್ತು ಕೆಲಸವನ್ನು ಉಳಿಸಿಕೊಂಡ ಕಾರ್ಮಿಕರ ಆದಾಯವು ಮೂರನೇ ಎರಡಷ್ಟು ಕಡಿತವಾಗಿದೆ. ವೇತನದಾರರಲ್ಲಿ ಶೇ 44ರಷ್ಟು ಮಂದಿಗೆ ಲಾಕ್‌ಡೌನ್‌ ಅವಧಿಯಲ್ಲಿ ವೇತನ ಕಡಿತವಾಗಿದೆ ಅಥವಾ ವೇತನವೇ ಸಿಕ್ಕಿಲ್ಲ ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

ADVERTISEMENT

ಹತ್ತರಲ್ಲಿ ಆರು ಕುಟುಂಬಗಳಿಗೆ ಒಂದು ವಾರಕ್ಕೆ ಆಗುವಷ್ಟು ಅಗತ್ಯ ವಸ್ತುಗಳ ಖರೀದಿಗೆ ಹಣ ಇರಲಿಲ್ಲ. ಆಹಾರ ಸೇವನೆ ಪ್ರಮಾಣವನ್ನು ಕಡಿಮೆ ಮಾಡಿದ್ದೇವೆ ಎಂದು ಹತ್ತರಲ್ಲಿ ಎಂಟು ಕುಟುಂಬಗಳವರು ಹೇಳಿದ್ದಾರೆ. ಸಂಕಷ್ಟದಲ್ಲಿದ್ದವರ ಪೈಕಿ ಶೇ 27ರಷ್ಟು ಮಂದಿ ತಮಗೆ ಸರ್ಕಾರದಿಂದ ಯಾವುದೇ ರೀತಿಯ ನಗದು ನೆರವು ಸಿಕ್ಕಿಲ್ಲ ಎಂದಿದ್ದಾರೆ.

ಕರ್ನಾಟಕದಲ್ಲಿನ ಕಾರ್ಮಿಕ ಮಾರುಕಟ್ಟೆಯ ಮೇಲೆ ಆಗಿರುವ ಪರಿಣಾಮ ಬಹಳ ದೊಡ್ಡದು. ಜೀವನೋಪಾಯಗಳು ಹಿಂದೆಂದೂ ಇಲ್ಲದ ರೀತಿಯಲ್ಲಿ ನಷ್ಟವಾಗಿವೆ. ಇವು ಪುನಶ್ಚೇತನಗೊಳ್ಳಲು ಬಹಳ ಕಾಲ ಬೇಕು ಮತ್ತು ಅದು ವೇದನಾದಾಯಕವಾಗಿರಲಿದೆ ಎಂದು ಸಮೀಕ್ಷೆ ವರದಿಯಲ್ಲಿ ಹೇಳಲಾಗಿದೆ.

ಸಲಹೆಗಳು

* ಸಾರ್ವತ್ರಿಕ ಪಡಿತರ ವಿತರಣೆಯನ್ನು ಆರು ತಿಂಗಳು ಮುಂದುವರಿಸಬೇಕು.

* ಒಂದು ಕುಟುಂಬಕ್ಕೆ ₹ 7,000ದಂತೆ ಕನಿಷ್ಠ ಎರಡು ತಿಂಗಳು ಪಾವತಿಸಬೇಕು.

* ಗ್ರಾಮೀಣ ಉದ್ಯೋಗ ಖಾತರಿಯನ್ನು ವಿಸ್ತರಿಸಬೇಕು, ನಗರದಲ್ಲಿಯೂ ಆರಂಭಿಸಬೇಕು.

ಅಂಕಿಆಂಶ

ಶೇ 76ರಷ್ಟು ಕಾರ್ಮಿಕರು ನಗರದಲ್ಲಿ ಕೆಲಸ ಕಳೆದುಕೊಂಡವರು. ಶೇ 66ರಷ್ಟು ಮಂದಿ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಕಳೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.