ಪಿಟಿಐ
ನವದೆಹಲಿ: ದೇಶದಾದ್ಯಂತ ಇರುವ ನೋಂದಾಯಿತ ವಕ್ಫ್ ಆಸ್ತಿಗಳ ವಿವರಗಳನ್ನು ಆರು ತಿಂಗಳೊಳಗೆ ‘ಉಮೀದ್ ಪೋರ್ಟಲ್’ನಲ್ಲಿ ಕಡ್ಡಾಯವಾಗಿ ಅಪ್‌ಲೋಡ್ ಮಾಡಬೇಕು ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಭಾನುವಾರ ತಿಳಿಸಿದೆ.
ಈ ನಿಟ್ಟಿನಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಇನ್ನಷ್ಟು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಅದು ಹೇಳಿದೆ.
ಸಚಿವಾಲಯದ ಕಾರ್ಯದರ್ಶಿ ಚಂದ್ರಶೇಖರ್ ಕುಮಾರ್ ಅವರು ಶನಿವಾರ ಮುಂಬೈನಲ್ಲಿರುವ ಮಹಾರಾಷ್ಟ್ರ ರಾಜ್ಯ ವಕ್ಫ್ ಮಂಡಳಿಯ ಸಿಇಒ ಕಚೇರಿಗೆ ಭೇಟಿ ನೀಡಿ, ಪರಿಶೀಲನಾ ಸಭೆ ನಡೆಸಿದರು. ಅವರು ಕಳೆದ ವಾರ ಬಿಹಾರದಲ್ಲಿ ಇದೇ ರೀತಿಯ ಪರಿಶೀಲನೆ ನಡೆಸಿದ್ದರು.
ಪೋರ್ಟಲ್ ಮತ್ತು ಅದರ ಅನುಷ್ಠಾನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಲಹೆಗಳೇನಾದರೂ ಇದ್ದರೆ ನೀಡುವಂತೆ ಅವರು ಸಭೆಯಲ್ಲಿ ತಿಳಿಸಿದರು.
ವಕ್ಫ್ ಆಸ್ತಿಗಳ ನಿರ್ವಹಣೆಯನ್ನು ಸುಗಮಗೊಳಿಸಲು ಮತ್ತು ಪಾರದರ್ಶಕತೆ ಹೆಚ್ಚಿಸಲು ಕೇಂದ್ರ ಸರ್ಕಾರ ಜೂನ್ 6ರಂದು ‘ಉಮೀದ್ ಪೋರ್ಟಲ್’ಗೆ ಚಾಲನೆ ನೀಡಿದೆ. ಆಸ್ತಿಗಳಿಗೆ ‘ಜಿಯೊ ಟ್ಯಾಗ್’ ಮಾಡುವುದು ಇದರ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ.
ಈ ಪೋರ್ಟಲ್ ಕೇಂದ್ರೀಕೃತ ಡಿಜಿಟಲ್ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಆಸ್ತಿ ದಾಖಲೆಗಳು ನೈಜ ಸಮಯದ ಅಪ್‌ಲೋಡ್, ಪರಿಶೀಲನೆ ಮತ್ತು ಮೇಲ್ವಿಚಾರಣೆಯನ್ನು ಇದು ನಿರ್ವಹಿಸಲಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.