ADVERTISEMENT

ಭೀಕರ ರೈಲು ದುರಂತ: ಪವಾಡ ಸದೃಶ ಎಂಬಂತೆ ಬದುಕುಳಿದ ಲೋಕೊ ಪೈಲಟ್‌ಗಳು, ಗಾರ್ಡ್‌ಗಳು!

ಒಡಿಶಾದ ಬಾಲೆಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಶುಕ್ರವಾರ ಸಂಜೆ ಸಂಭವಿಸಿದ ತ್ರಿವಳಿ ರೈಲು ಅಪಘಾತ

ಪಿಟಿಐ
Published 4 ಜೂನ್ 2023, 11:29 IST
Last Updated 4 ಜೂನ್ 2023, 11:29 IST
ಒಡಿಶಾದ ಬಾಲೆಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಶುಕ್ರವಾರ ಸಂಜೆ ಸಂಭವಿಸಿದ ತ್ರಿವಳಿ ರೈಲು ಅಪಘಾತ
ಒಡಿಶಾದ ಬಾಲೆಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಶುಕ್ರವಾರ ಸಂಜೆ ಸಂಭವಿಸಿದ ತ್ರಿವಳಿ ರೈಲು ಅಪಘಾತ   

ಕೋಲ್ಕತ್ತ: ಒಡಿಶಾದ ಬಾಲೆಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಶುಕ್ರವಾರ ಸಂಜೆ ಸಂಭವಿಸಿದ ತ್ರಿವಳಿ ರೈಲು ಅಪಘಾತದಲ್ಲಿ ಮೂರೂ ರೈಲಿನ ಲೋಕೊ ಪೈಲಟ್‌ಗಳು, ಗಾರ್ಡ್‌ಗಳು ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದ್ದಾರೆ.

ಈ ಕುರಿತು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ತನ್ನ ನಿಗದಿತ ಹಳಿಯಲ್ಲಿ ಹೋಗದೇ ಲೂಪ್ ಲೈನ್‌ನಲ್ಲಿ ಗಂಟೆಗೆ 128 ಕಿ.ಮೀ. ವೇಗದಲ್ಲಿ ಹೋದ ಶಾಲಿಮಾರ್–ಕೋರಮಂಡಲ್ ರೈಲು ಅದೇ ಹಳಿಯಲ್ಲಿ ಅದಾಗಲೇ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಇದರಲ್ಲಿದ್ದ ಒಬ್ಬ ಲೋಕೊಪೈಲಟ್, ಸಹ ಲೋಕೊಪೈಲಟ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಅವರ ಪರಿಸ್ಥಿತಿ ಏನೂ ಹೇಳುವಂತಿಲ್ಲ ಎಂದು ಆಗ್ನೇಯ ರೈಲ್ವೆದ ಖರಗ್‌ಪುರ್‌ ವಲಯದ ಮ್ಯಾನೇಜರ್ ರಾಜೇಶ್ ಕುಮಾರ್ ತಿಳಿಸಿದ್ದಾರೆ.

ADVERTISEMENT

ಗೂಡ್ಸ್ ರೈಲಿನಲ್ಲಿದ್ದ ಎಂಜಿನ್ ಡ್ರೈವರ್ ಹಾಗೂ ಗಾರ್ಡ್ ಅಷ್ಟೊಂದು ಗಂಭೀರವಲ್ಲದೇ ಗಾಯಗೊಂಡಿದ್ದು ಅವರನ್ನು ಪ್ರತ್ಯೇಕ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಾಜೇಶ್ ಕುಮಾರ್ ತಿಳಿಸಿದ್ದಾರೆ.

ಕೋರಮಂಡಲ್ ರೈಲು ಡಿಕ್ಕಿ ಆದ ಸಮಯದಲ್ಲಿ ಪಕ್ಕದ ಇನ್ನೊಂದು ಮುಖ್ಯ ಹಳಿಯಲ್ಲಿ 116 ಕಿಮೀನಲ್ಲಿ ಸಾಗುತ್ತಿದ್ದ ಬೆಂಗಳೂರು–ಹೌರಾ ರೈಲಿನ ಕೊನೆಯ ಎರಡು ಬೋಗಿಗಳಿಗೆ ಕೋರಮಂಡಲ್ ರೈಲಿನ ಕೆಲ ಬೋಗಿಗಳು ಅಪ್ಪಳಿಸಿದ್ದವು. ಇದರಿಂದ ಕೊನೆ ಬೋಗಿಯಲ್ಲಿದ್ದ ಬೆಂಗಳೂರು–ಹೌರಾ ರೈಲಿನ ಗಾರ್ಡ್ ಕೂಡ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ರೈಲಿನಲ್ಲಿದ್ದ ಲೋಕೊಪೈಲಟ್‌ಗಳಿಗೆ ಏನೂ ಆಗಿಲ್ಲ.

ಈ ರೈಲು ದುರಂತದಲ್ಲಿ ಇದುವರೆಗೆ 288 ಪ್ರಯಾಣಿಕರು ಮೃತಪಟ್ಟಿದ್ದು, 1000 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.