ADVERTISEMENT

‘ಬುಲ್ಲಿ ಬಾಯಿ’ ಆ್ಯಪ್‌ ಪ್ರಕರಣ: ಅಸ್ಸಾಂನಲ್ಲಿ ಮುಖ್ಯ ಸಂಚುಕೋರ ನೀರಜ್‌ ಬಂಧನ

ದೆಹಲಿ ಪೊಲೀಸರ ಕಾರ್ಯಾಚರಣೆ: ಬಂಧಿತ ಎಂಜಿನಿಯರಿಂಗ್‌ ವಿದ್ಯಾರ್ಥಿ, ಜೋರ್ಹಾಟ್‌ ನಿವಾಸಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2022, 12:32 IST
Last Updated 6 ಜನವರಿ 2022, 12:32 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ದೇಶದ ಗಮನ ಸೆಳೆದಿರುವ ‘ಬುಲ್ಲಿ ಬಾಯಿ’ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಪೊಲೀಸರು ಅಸ್ಸಾಂನ ಜೋರ್ಹಾಟ್‌ನಲ್ಲಿ ನೀರಜ್‌ ಬಿಷ್ಣೋಯಿ ಎಂಬ ಎಂಜಿನಿಯರಿಂಗ್‌ ವಿದ್ಯಾರ್ಥಿಯನ್ನು ಗುರುವಾರ ಬಂಧಿಸಿದ್ದಾರೆ.

‘ನೀರಜ್‌ ಈ ಪ್ರಕರಣದ ಮುಖ್ಯ ಸಂಚುಕೋರ ಹಾಗೂ ಆ್ಯಪ್ಅನ್ನು ಸೃಷ್ಟಿಸಿದಾತ’ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಈವರಗೆ ನಾಲ್ವರನ್ನು ಬಂಧಿಸಿದಂತಾಗಿದೆ.

ದೆಹಲಿ ಪೊಲೀಸ್‌ ವಿಶೇಷ ಘಟಕದ ಅಂಗಸಂಸ್ಥೆಯಾದ ‘ಇಂಟೆಲಿಜೆನ್ಸ್ ಫ್ಯೂಜನ್ ಆ್ಯಂಡ್ ಸ್ಟ್ಯಾಟೆಜಿಕ್ ಆಪರೇಷನ್ಸ್‌ನ (ಐಎಫ್‌ಎಸ್‌ಒ) ಅಧಿಕಾರಿಗಳು ಅಸ್ಸಾಂನ ಜೋರ್ಹಾಟ್‌ ನಿವಾಸಿ ನೀರಜ್‌ರನ್ನು ಬಂಧಿಸಿದ್ದಾರೆ. ಈತ ಭೋಪಾಲ್‌ನಲ್ಲಿರುವ ವೆಲ್ಲೂರ್ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಎರಡನೇ ವರ್ಷದ ಬಿ.ಟೆಕ್‌ ವಿದ್ಯಾರ್ಥಿ.

ADVERTISEMENT

ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಪೊಲೀಸರು ಬಂಧಿಸಿರುವ ಮೊದಲ ಆರೋಪಿ ಈತ. ಪ್ರಕರಣ ಕುರಿತು ಮುಂಬೈಸೈಬರ್‌ ಕ್ರೈಂ ಪೊಲೀಸರು ಸಹ ತನಿಖೆ ನಡೆಸುತ್ತಿದ್ದು, ಈ ವರೆಗೆ ಮೂವರನ್ನು ಬಂಧಿಸಿದ್ದಾರೆ.

ಶ್ವೇತಾ ಸಿಂಗ್‌ (18) ಹಾಗೂ ದೆಹಲಿ ವಿ.ವಿಯಲ್ಲಿ ಬಿಎಸ್‌ಸಿ ಅಧ್ಯಯನ ಮಾಡುತ್ತಿರುವ ಮಯಂಕ್ ರಾವಲ್ (20) ಎಂಬ ವಿದ್ಯಾರ್ಥಿಯನ್ನು ಮುಂಬೈ ಪೊಲೀಸರು ಉತ್ತರಾಖಂಡದಲ್ಲಿ ಬಂಧಿಸಿದ್ದಾರೆ. ವಿಶಾಲಕುಮಾರ್‌ ಝಾ (21) ಎಂಬ ಎಂಜಿನಿಯರಿಂಗ್‌ ವಿದ್ಯಾರ್ಥಿಯನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

‘ಬಂಧಿತ ನೀರಜ್‌ ಬಿಷ್ಣೋಯಿ ಗಿಟ್‌ಹಬ್‌ ವೇದಿಕೆಯಲ್ಲಿ ‘ಬುಲ್ಲಿ ಬಾಯಿ’ ಆ್ಯಪ್ಅನ್ನು ಸೃಷ್ಟಿಸಿದ್ದು, ಈತನೇ ಆ್ಯಪ್‌ಗೆ ಸಂಬಂಧಿಸಿದ ಮುಖ್ಯ ಟ್ವಿಟರ್‌ ಖಾತೆಯನ್ನು ಹೊಂದಿದ್ದಾನೆ’ ಎಂದು ಐಎಫ್‌ಎಸ್‌ಒ ಡಿಸಿಪಿ ಕೆ.ಪಿ.ಎಸ್‌.ಮಲ್ಹೋತ್ರಾ ಹೇಳಿದ್ದಾರೆ.

100ಕ್ಕೂ ಹೆಚ್ಚು ಪ್ರಭಾವಿ ಮುಸ್ಲಿಂ ಮಹಿಳೆಯರ ಭಾವಚಿತ್ರಗಳನ್ನು ‘ಬುಲ್ಲಿ ಬಾಯಿ’ ಹೆಸರಿನ ಆ್ಯಪ್‌ಗೆ ಅಪ್‌ಲೋಡ್‌ ಮಾಡಿ ಇವರನ್ನು ಹರಾಜಿಗಿಡಲಾಗಿದೆ ಎಂಬ ಒಕ್ಕಣೆಯೊಂದಿಗೆ ಅವಹೇಳನ ಮಾಡಿರುವ ಪ್ರಕರಣ ಇದಾಗಿದೆ.

ಸುದ್ದಿಪೋರ್ಟಲ್ ‘ದಿ ವೈರ್‌’ನ ಪತ್ರಕರ್ತೆ ಇಸ್ಮತ್ ಆರಾ ಎಂಬುವವರು ನೀಡಿದ ದೂರಿನನ್ವಯ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ. ಇನ್ನೊಂದೆಡೆ, ಮುಂಬೈ ಪೊಲೀಸರು ಸಹ ತನಿಖೆ ನಡೆಸುತ್ತಿದ್ದಾರೆ.

ಈ ಆ್ಯಪ್‌ ವಿರುದ್ಧ ಆಕ್ರೋಶ ಹೆಚ್ಚುತ್ತಿದ್ದಂತೆಯೇ ಮಧ್ಯಪ್ರವೇಶಿಸಿದ ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್, ಕಠಿಣ ಕ್ರಮದ ಭರವಸೆ ನೀಡಿದರು. ನಂತರ ಆ್ಯಪ್‌ಅನ್ನು ನಿರ್ಬಂಧಿಸಲಾಯಿತು.

‘ಬುಲ್ಲಿ ಬಾಯಿ’ ಕೂಡ ‘ಸುಲ್ಲಿ ಡೀಲ್ಸ್’ ನಂತೆ ಗಿಟ್‌ಹಬ್‌ ವೇದಿಕೆಯ ಆ್ಯಪ್‌ ಆಗಿದ್ದು, ಇವುಗಳಲ್ಲಿ ಸಾಮ್ಯತೆ ಇದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ದೆಹಲಿ ಪೊಲೀಸ್‌ನ ಸೈಬರ್‌ ಕ್ರೈಂ ವಿಭಾಗವು ಟ್ವಿಟರ್‌ ಸಂಸ್ಥೆಯನ್ನು ಸಂಪರ್ಕಿಸಿ, ಈ ಆ್ಯಪ್‌ ಬಗ್ಗೆ ಮೊದಲು ಪೋಸ್ಟ್ ಮಾಡಿದ ವ್ಯಕ್ತಿಯ ಟ್ವಿಟರ್‌ ಖಾತೆಯನ್ನು ನಿರ್ಬಂಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.