ಸುಪ್ರೀಂ ಕೋರ್ಟ್
ನವದೆಹಲಿ: ಅಲ್ಪಾವಧಿ ಸೇವೆಗೆ ನೇಮಕಗೊಂಡಿರುವ 2007ನೇ ಬ್ಯಾಚ್‌ನ ಅಧಿಕಾರಿಯನ್ನು ಕೋರ್ಟ್ ನಿರ್ದೇಶನದ ಹೊರತಾಗಿಯೂ, ಕಾಯಂ ನಿಯೋಜನೆಗೆ ಪರಿಗಣಿಸದ ನೌಕಾಪಡೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತರಾಟೆಗೆ ತೆಗೆದುಕೊಂಡಿತು. ಅಲ್ಲದೆ ‘ಅಹಂಕಾರವನ್ನು ಬಿಟ್ಟುಬಿಡಿ’ ಎಂದು ಅಧಿಕಾರಿಗಳಿಗೆ ಹೇಳಿತು.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್.ಕೋಟೀಶ್ವರ ಸಿಂಗ್ ಅವರನ್ನು ಒಳಗೊಂಡ ನ್ಯಾಯಪೀಠವು, 2007ನೇ ಬ್ಯಾಚ್‌ನ ಜಡ್ಜ್ ಅಡ್ವೊಕೇಟ್ ಜನರಲ್ಸ್ (ಜೆಎಜಿ) ವಿಭಾಗದ ಅಧಿಕಾರಿ ಸೀಮಾ ಚೌಧರಿ ಪ್ರಕರಣವನ್ನು ಒಂದು ವಾರದ ಒಳಗಾಗಿ ಪರಿಗಣಿಸಿ, ಅವರನ್ನು ಕಾಯಂ ನಿಯೋಜನೆ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿತು.
ಸೇನಾ ನ್ಯಾಯಾಲಯದಲ್ಲಿ ವಕೀಲ/ವಕೀಲೆ ಮತ್ತು ಸಲಹೆಗಾರ/ಸಲಹೆಗಾರ್ತಿ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಲು ಪರಮಾಧಿಕಾರ ಹೊಂದಿರುವ ಸೇನಾಧಿಕಾರಿಯನ್ನು ಜಡ್ಜ್ ಅಡ್ವೊಕೇಟ್ ಜನರಲ್(ಜೆಎಜಿ) ಎಂದು ಕರೆಯಲಾಗುತ್ತದೆ.
‘ಸಾಕು ಇಲ್ಲಿಗೆ ನಿಲ್ಲಿಸಿ. ತಪ್ಪನ್ನು ಸರಿಪಡಿಸಿಕೊಳ್ಳಿ. ಚೌಧರಿ ಅವರನ್ನು ಕಾಯಂ ನಿಯೋಜನೆ ಮಾಡಿಕೊಳ್ಳಲು ಒಂದು ವಾರ ಕಾಲಾವಕಾಶ ನೀಡುತ್ತೇವೆ. ಕೋರ್ಟ್ ಆದೇಶವನ್ನು ಮೀರಿ ನಡೆಯಬಹುದು ಎಂದು ಸಂಬಂಧಪಟ್ಟ ಅಧಿಕಾರಿಗಳು ಭಾವಿಸಿದ್ದಾರೆಯೇ? ಅದ್ಯಾವ ರೀತಿಯ ಶಿಸ್ತಿನ ಸಿಪಾಯಿಗಳು ನೀವು?’ ಎಂದು ನ್ಯಾಯಪೀಠವು ನೌಕಾಪಡೆಯ ಅಧಿಕಾರಿಗಳು ಮತ್ತು ಕೇಂದ್ರದ ಪರ ಹಾಜರಿದ್ದ ಹಿರಿಯ ವಕೀಲ ಆರ್.ಬಾಲಸುಬ್ರಮಣಿಯನ್ ಅವರನ್ನು ಪ್ರಶ್ನಿಸಿತು.
ತಮ್ಮ ನೇಮಕಾತಿಯನ್ನು ಕಾಯಂಗೊಳಿಸದ ಕ್ರಮವನ್ನು ಪ್ರಶ್ನಿಸಿ 69 ಮಹಿಳಾ ಅಧಿಕಾರಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.