ADVERTISEMENT

ವನ್ಯಜೀವಿ ಸಪ್ತಾಹ: ಹುಲಿ ಸಂರಕ್ಷಣಾ ಜಾಥಾಗೆ ಕೇಂದ್ರ ಸಚಿವ ಭೂಪೇಂದರ್ ಯಾದವ್ ಚಾಲನೆ

ಪಿಟಿಐ
Published 2 ಅಕ್ಟೋಬರ್ 2021, 10:20 IST
Last Updated 2 ಅಕ್ಟೋಬರ್ 2021, 10:20 IST
ಹುಲಿ
ಹುಲಿ   

ನವದೆಹಲಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಮತ್ತು ವನ್ಯಜೀವಿ ಸಪ್ತಾಹದ ಅಂಗವಾಗಿ ದೇಶದ 51 ಮೀಸಲು ಅರಣ್ಯ ಪ್ರದೇಶಗಳಲ್ಲಿ ‘ಹುಲಿ ಸಂರಕ್ಷಣಾ ಜಾಥಾ’ಗೆ ಕೇಂದ್ರ ಪರಿಸರ ಸಚಿವ ಭೂಪೇಂದರ್‌ ಯಾದವ್‌ ಚಾಲನೆ ನೀಡಿದರು.

ದೇಶದಾದ್ಯಂತ ಸುಂದರ ಪ್ರಾಕೃತಿಕ ಮತ್ತು ಭೌಗೋಳಿಕ ಭೂಪ್ರದೇಶವನ್ನು ಜಾಥಾ ಹಾದುಹೋಗಲಿದ್ದು, ಏಳು ದಿನಗಳಲ್ಲಿ (ಅಕ್ಟೋಬರ್‌ 2 ರಿಂದ 8) 7,500 ಕಿ.ಮೀ.ಗಿಂತಲೂ ಹೆಚ್ಚು ದೂರ ಕ್ರಮಿಸಲಿದೆ.

ಕರ್ನಾಟಕದ ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶ, ಮಹಾರಾಷ್ಟ್ರದ ನವೇಗಾಂವ್‌ ನಾಗಜಿರಾ ಹುಲಿ ಮೀಸಲು ಅರಣ್ಯ ಮತ್ತು ಮಧ್ಯಪ್ರದೇಶದ ಸಂಜಯ್‌ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಚಿವ ಭೂಪೇಂದ್ರ ಯಾದವ್‌ ವರ್ಚುವಲ್‌ ಮೂಲಕ ಜಾಥಾಗೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.

ADVERTISEMENT

ಅರಣ್ಯ ಮತ್ತು ವನ್ಯಜೀವಿ ಪ್ರದೇಶಗಳಲ್ಲಿ ಸುಸ್ಥಿರ ಪ್ರವಾಸೋದ್ಯಮ, ಗಂಗಾ ಮತ್ತು ಸಿಂಧೂ ನದಿಗಳ ಜಲಚರಗಳ ರಕ್ಷಣೆಗೆ ಮಾರ್ಗಸೂಚಿಗಳನ್ನು, ಜೌಗು ಪ್ರದೇಶಗಳ ಆನ್‌ಲೈನ್‌ ಪೋರ್ಟಲ್‌ ಅನ್ನು ಇದೇ ವೇಳೆ ಯಾದವ್‌ ಬಿಡುಗಡೆ ಮಾಡಿದರು.

ದೆಹಲಿಯ ಪರಿಸರ ಸಚಿವಾಲಯದ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರಿಸರ ಖಾತೆ ರಾಜ್ಯ ಸಚಿವೆ ಅಶ್ವಿನಿ ಚೌಬೆ, ಪರಿಸರ ಕಾರ್ಯದರ್ಶಿ ಆರ್‌.ಪಿ.ಗುಪ್ತಾ, ಸಚಿವಾಲಯದ ಹೆಚ್ಚುವರಿ ಮಹಾನಿರ್ದೇಶಕರಾದ ಸೌಮಿತ್ರ ದಾಸ್‌ಗುಪ್ತಾ ಮತ್ತು ಎಸ್‌.ಪಿ.ಯಾದವ್‌ ಭಾಗವಹಿಸಿದ್ದರು.

‘ಹುಲಿಗಳಿಗಾಗಿ ಭಾರತ –ಒಂದು ಜಾಥಾ’ ಘೋಷವಾಕ್ಯದೊಂದಿಗೆ 51 ಹಲಿ ಸಂರಕ್ಷಿತ ಪ್ರದೇಶಗಳು, 18 ಹುಲಿ ಮೀಸಲು ರಾಜ್ಯಗಳಲ್ಲಿ ಕ್ಷೇತ್ರ ನಿರ್ದೇಶಕರು, ಉಪನಿರ್ದೇಶಕರು ಮತ್ತು ಸಂಬಂಧಿತರ ಹುಲಿ ಸಂರಕ್ಷಿತ ಸಿಬ್ಬಂದಿ ಜಾಥಾದಲ್ಲಿ ಹೊರಟು ಗೊತ್ತುಪಡಿಸಿದ ಜಾಗದಲ್ಲಿ ಸೇರುತ್ತಾರೆ. ‘ಹುಲಿ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದು ಈ ಜಾಥಾದ ಪ್ರಮುಖ ಉದ್ದೇಶವಾಗಿದೆ’ ಎಂದು ಸಚಿವ ಭೂಪೇಂದ್ರ ಯಾದವ್‌ ಇದೇ ಸಂದರ್ಭದಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.