ADVERTISEMENT

ಪಿಂಚಣಿ: ಭಾಗಶಃ ಮುಂಗಡ ವಾಪಸ್ ಮತ್ತೆ ಜಾರಿಗೆ ‘ಇಪಿಎಫ್‌ಒ’ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 20:29 IST
Last Updated 22 ಆಗಸ್ಟ್ 2019, 20:29 IST
ಇಪಿಎಫ್‌ಒ
ಇಪಿಎಫ್‌ಒ   

ನವದೆಹಲಿ: ಉದ್ಯೋಗಿಗಳ ‍ಪಿಂಚಣಿ ಯೋಜನೆಯಡಿ ಭಾಗಶಃ ಮೊತ್ತವನ್ನು ಮುಂಚಿತವಾಗಿ ಒಂದೇ ಕಂತಿನಲ್ಲಿ ಪಡೆಯುವ ಸೌಲಭ್ಯವನ್ನು ಮತ್ತೆ ಜಾರಿಗೆ ತರಲು ಭವಿಷ್ಯ ನಿಧಿ ಸಂಘಟನೆಯು ನಿರ್ಧರಿಸಿದೆ.

ಈ ಸೌಲಭ್ಯದಡಿ (commutation), ತಿಂಗಳ ಪಿಂಚಣಿ ಮೊತ್ತವನ್ನು ಒಂದು ಮೂರಾಂಶದಷ್ಟು ಕಡಿಮೆ ಮಾಡಲಾಗುವುದು. ಹೀಗೆ ಕಡಿಮೆ ಮಾಡಲಾದ ದೊಡ್ಡ ಮೊತ್ತವನ್ನು ಒಂದೇ ಕಂತಿನಲ್ಲಿ ಪಿಂಚಣಿದಾರರಿಗೆ ನೀಡಲಾಗುವುದು. 15 ವರ್ಷಗಳ ನಂತರ ಪಿಂಚಣಿದಾರರು ಮತ್ತೆ ಪೂರ್ಣ ಪ್ರಮಾಣದಲ್ಲಿ ತಿಂಗಳ ಪಿಂಚಣಿ ಪಡೆಯಬಹುದು.

ಇದೇ 21ರಂದು ಹೈದರಾಬಾದ್‌ನಲ್ಲಿ ನಡೆದ ‘ಇಪಿಎಫ್‌ಒ’ದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಂಘಟನೆಯ ನೀತಿ ನಿರ್ಧಾರ ಕೈಗೊಳ್ಳುವ ಉನ್ನತ ಸಮಿತಿಯಾಗಿರುವ ಟ್ರಸ್ಟಿಗಳ ಕೇಂದ್ರೀಯ ಮಂಡಳಿಯು ಈ ನಿರ್ಣಯ ಕೈಗೊಂಡಿದೆ.

ADVERTISEMENT

ಈ ಸೌಲಭ್ಯವನ್ನು 2009ರಲ್ಲಿ ರದ್ದುಪಡಿಸಲಾಗಿತ್ತು. ಇದನ್ನು ಮತ್ತೆ ಜಾರಿಗೆ ತರಬೇಕು ಎಂದು ಪಿಂಚಣಿದಾರರು ಒತ್ತಾಯಿಸುತ್ತಿದ್ದರು.

‘ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆ 1995’ಯಡಿ, ಆರಂಭದಲ್ಲಿ ನಿವೃತ್ತರು ತಮ್ಮ ಪಿಂಚಣಿಯ 10 ವರ್ಷಗಳ ಅವಧಿಯ ಒಂದು ಮೂರಾಂಶದಷ್ಟು ಮೊತ್ತವನ್ನು ಒಂದೇ ಬಾರಿಗೆ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಆನಂತರ ಇದನ್ನು 15 ವರ್ಷಗಳಿಗೆ ವಿಸ್ತರಿಸಲಾಗಿತ್ತು.

ಇದು ಸರ್ಕಾರಿ ನೌಕರರಿಗೆ ಅನ್ವಯಗೊಳ್ಳುತ್ತದೆ. ಇದರಿಂದ 6.3 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ ಎಂದು ‘ಇಪಿಎಫ್‌ಒ’ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.