ADVERTISEMENT

ಎಥೆನಾಲ್ ಮಿಶ್ರಣ ನೀತಿಯಿಂದ ಗಡ್ಕರಿ ಪುತ್ರರಿಗೆ ಲಾಭ: ಕಾಂಗ್ರೆಸ್

ಎಥೆನಾಲ್‌ ಮಿಶ್ರಣ: ಕೇಂದ್ರ ಸಚಿವರ ವಿರುದ್ಧ ಹಿತಾಸಕ್ತಿ ಸಂಘರ್ಷ ಆರೋಪ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 14:17 IST
Last Updated 4 ಸೆಪ್ಟೆಂಬರ್ 2025, 14:17 IST
ನಿತಿನ್‌ ಗಡ್ಕರಿ
ನಿತಿನ್‌ ಗಡ್ಕರಿ   

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಇಬ್ಬರು ಪುತ್ರರು ಎಥೆನಾಲ್ ಮಿಶ್ರಣ ನೀತಿಯಿಂದ ಆರ್ಥಿಕವಾಗಿ ಲಾಭ ಗಳಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಗುರುವಾರ ಆರೋಪಿಸಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ಮಾಧ್ಯಮ ಹಾಗೂ ಪ್ರಚಾರ ವಿಭಾಗದ ಮುಖ್ಯಸ್ಥ ಪವನ್‌ ಖೇರಾ, ಗಡ್ಕರಿ ಅವರಿಗೆ ಸಂಬಂಧಿಸಿದ ‘ಹಿತಾಸಕ್ತಿ ಸಂಘರ್ಷ’ದ ಬಗ್ಗೆ ಲೋಕಪಾಲ ತನಿಖೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸವಾಲು ಹಾಕಿದರು.

‘ಎಥೆನಾಲ್‌ ಉತ್ಪಾದನೆ ಹೆಚ್ಚಿಸಲು ಗಡ್ಕರಿ ಅವರು 2014ರಿಂದಲೂ ಲಾಬಿ ಮಾಡುತ್ತಿದ್ದಾರೆ. ಮರ ಆಧಾರಿತ ಉತ್ಪನ್ನಗಳು ಮತ್ತು ತ್ಯಾಜ್ಯದಿಂದ ಎಥೆನಾಲ್‌ ಉತ್ಪಾದಿಸುವ ಐದು ಘಟಕಗಳನ್ನು ಸರ್ಕಾರ ಸ್ಥಾಪಿಸಲಿದೆ ಎಂದು ಅವರು 2018ರಲ್ಲಿ ಘೋಷಿಸಿದ್ದರು. ಮಾತ್ರವಲ್ಲ, ಎಥೆನಾಲ್‌ ಮಿಶ್ರಿತ ಪೆಟ್ರೋಲ್‌ ಮತ್ತು ಡೀಸೆಲ್‌ ಅನ್ನು ಕ್ರಮವಾಗಿ ₹55 ಹಾಗೂ ₹ 50ಕ್ಕೆ ಮಾರಾಟ ಮಾಡಲಾಗುವುದು ಎಂದಿದ್ದರು’ ಎಂಬುದಾಗಿ ಖೇರಾ ತಿಳಿಸಿದರು.

ADVERTISEMENT

‘ಆದಾಗ್ಯೂ, ಒಟ್ಟು ಉತ್ಪಾದನೆಯಾಗುತ್ತಿರುವ 672 ಕೋಟಿ ಲೀಟರ್ ಎಥೆನಾಲ್‌ನಲ್ಲಿ ಶೇ 56.75ರಷ್ಟು ಕಬ್ಬಿನಿಂದ ಮತ್ತು ಶೇ 38.08ರಷ್ಟು ಆಹಾರ ಧಾನ್ಯಗಳಿಂದ ಉತ್ಪಾದಿಸಲಾಗುತ್ತಿದೆ. ಒಂದೇ ಒಂದು ಲೀಟರ್‌ ಕೂಡ ತ್ಯಾಜ್ಯದಿಂದ ಉತ್ಪಾದಿಸಲಾಗುತ್ತಿಲ್ಲ’ ಎಂದು ದೂರಿದರು.

‘ಕಬ್ಬಿನಿಂದ ಉತ್ಪಾದಿಸುವ ಎಥೆನಾಲ್‌ಗೆ ಏಕೆ ಪ್ರಚಾರ ನೀಡಲಾಗುತ್ತಿದೆ? ಏಕೆಂದರೆ, ಗಡ್ಕರಿ ಮತ್ತು ಅವರ ಆಪ್ತರು ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳಲ್ಲಿ ವ್ಯವಹಾರ ಹಿತಾಸಕ್ತಿಗಳನ್ನು ಹೊಂದಿದ್ದಾರೆ’ ಎಂದು ಪ್ರತಿಪಾದಿಸಿದರು.

ಹಿತಾಸಕ್ತಿ ಸಂಘರ್ಷದ ಆರೋಪ ಮಾಡಿದ ಖೇರಾ ಅವರು, ನಿತಿನ್ ಗಡ್ಕರಿ ಒಡೆತನದ ಸಿಯಾನ್ ಅಗ್ರೋ ಇಂಡಸ್ಟ್ರೀಸ್‌ ಇನ್‌ಫ್ರಾಸ್ಟ್ರಕ್ಚರ್ ಮತ್ತು ಸಾರಂಗ್‌ ಗಡ್ಕರಿ ನಿರ್ದೇಶಕರಾಗಿರುವ ಮಾನಸ್‌ ಅಗ್ರೋ ಇಂಡಸ್ಟ್ರೀಸ್ ಕಂಪನಿಗಳು ಎಥೆನಾಲ್‌ ಪೂರೈಕೆ ಮಾಡುತ್ತಿವೆ ಎಂದರು.

‘ಸಿಯಾನ್ ಆಗ್ರೋದ ಆದಾಯವು ₹18 ಕೋಟಿಯಿಂದ (2024ರ ಜೂನ್) ₹523 ಕೋಟಿಗೆ (2025ರ ಜೂನ್) ಜಿಗಿದಿದೆ. ಈ ಕಂಪನಿಯ ಷೇರಿನ ಮೌಲ್ಯ ₹37.55ರಿಂದ (2025ರ ಜನವರಿ) ₹638ಕ್ಕೆ (2025ರ ಆಗಸ್ಟ್) ಏರಿಕೆಯಾಗಿದೆ’ ಎಂದು ತಿಳಿಸಿದರು.

‘ಇ20 ಪೆಟ್ರೋಲ್‌ (ಎಥೆನಾಲ್‌ ಮಿಶ್ರಿತ) ಬಳಕೆಯನ್ನು ಉತ್ತೇಜಿಸುವುದರ ಹಿಂದೆ ಗಡ್ಕರಿ ಮತ್ತು ಅವರ ಪುತ್ರರ ಕಂಪನಿಗಳಿಗೆ ಲಾಭ ತರುವ ಉದ್ದೇಶ ಅಡಗಿದೆಯೇ, ಈ ಬಗ್ಗೆ ಪ್ರಧಾನಿ ಮೋದಿ ಅವರು ಲೋಕಪಾಲ ತನಿಖೆ ಮಾಡಲು ಧೈರ್ಯ ತೋರುವರೇ’ ಎಂದು ಖೇರಾ ಪ್ರಶ್ನಿಸಿದರು.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.