
ನವದೆಹಲಿ: ರಷ್ಯಾದ ಮಿಲಿಟರಿಯೊಂದಿಗೆ ಸಂಪರ್ಕ ಹೊಂದಿದ್ದಕ್ಕಾಗಿ ಗುರುವಾರ ಯುರೋಪಿಯನ್ ಒಕ್ಕೂಟವು(ಇಯು) 45 ಕಂಪನಿಗಳ ಮೇಲೆ ನಿರ್ಬಂಧ ಹೇರಿದ್ದು, ಅದರಲ್ಲಿ ಮೂರು ಭಾರತದ ಕಂಪನಿಗಳು ಸೇರಿವೆ.
ಉಕ್ರೇನ್ ಮೇಲಿನ ಆಕ್ರಮಣಕ್ಕಾಗಿ ರಷ್ಯಾದ ಮೇಲೆ ಆರ್ಥಿಕ ಒತ್ತಡ ಹೇರುವ ಪ್ರಯತ್ನಗಳ ಭಾಗವಾಗಿರುವ 19ನೇ ನಿರ್ಬಂಧಗಳ ಪ್ಯಾಕೇಜ್‌ನ ಭಾಗವಾಗಿ ಯುರೋಪಿಯನ್ ಒಕ್ಕೂಟವು ದಂಡನಾತ್ಮಕ ಕ್ರಮಗಳನ್ನು ವಿಧಿಸಿದೆ.
ಯುರೋಪಿಯನ್ ಒಕ್ಕೂಟದ ಕ್ರಮಕ್ಕೆ ಭಾರತೀಯ ಅಧಿಕಾರಿಗಳಿಂದ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.
‘ಕಂಪ್ಯೂಟರ್ ಸಂಖ್ಯಾತ್ಮಕ ನಿಯಂತ್ರಣ (ಸಿಎನ್‌ಸಿ) ಯಂತ್ರೋಪಕರಣಗಳು, ಮೈಕ್ರೋಎಲೆಕ್ಟ್ರಾನಿಕ್ಸ್, ಮಾನವರಹಿತ ವೈಮಾನಿಕ ವಾಹನಗಳು(ಯುಎವಿ) ಮತ್ತು ಇತರ ಸುಧಾರಿತ ತಂತ್ರಜ್ಞಾನ ಉಪಕರಣಗಳ ಮೇಲಿನ ರಫ್ತು ನಿರ್ಬಂಧಗಳನ್ನು ತಪ್ಪಿಸುವುದನ್ನು ಸಕ್ರಿಯಗೊಳಿಸುವ ಮೂಲಕ ರಷ್ಯಾದ ಮಿಲಿಟರಿ ಮತ್ತು ಕೈಗಾರಿಕಾ ಸಂಕೀರ್ಣವನ್ನು ನೇರವಾಗಿ ಬೆಂಬಲಿಸುವ 45 ಹೊಸ ಕಂಪನಿಗಳನ್ನು ಯುರೋಪಿಯನ್ ಮಂಡಳಿ ಗುರುತಿಸಿದೆ’ ಎಂದು ಇಯು ಪ್ರಕಟಣೆ ತಿಳಿಸಿದೆ.
‘ದ್ವಿ-ಬಳಕೆಯ ಸರಕುಗಳು ಮತ್ತು ರಷ್ಯಾದ ರಕ್ಷಣಾ ಕ್ಷೇತ್ರದ ತಾಂತ್ರಿಕ ವರ್ಧನೆಗೆ ಸಾಮಾನ್ಯವಾಗಿ ಕೊಡುಗೆ ನೀಡಬಹುದಾದ ಉಪಕರಣಗಳಿಗೆ ಸಂಬಂಧಿಸಿದಂತೆ ಈ ಸಂಸ್ಥೆಗಳು ಕಠಿಣ ರಫ್ತು ನಿರ್ಬಂಧಗಳಿಗೆ ಒಳಪಟ್ಟಿರುತ್ತವೆ’ ಎಂದೂ ಅದು ಹೇಳಿದೆ.
'ಈ ಪೈಕಿ ಹದಿನೇಳು ಕಂಪನಿಗಳು ರಷ್ಯಾ ಹೊರತುಪಡಿಸಿ ಬೇರೆ ದೇಶಗಳಲ್ಲಿವೆ’ಎಂದು ಅದು ಹೇಳಿದೆ.
12 ಕಂಪನಿಗಳು ಹಾಂಗ್ ಕಾಂಗ್ ಸೇರಿದಂತೆ ಚೀನಾದಲ್ಲಿವೆ. ಮೂರು ಭಾರತದಲ್ಲಿ ಮತ್ತು ಎರಡು ಥೈಲ್ಯಾಂಡ್‌ನಲ್ಲಿವೆ ಎಂದು ಇಯು ತಿಳಿಸಿದೆ.
ಏರೋಟ್ರಸ್ಟ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್, ಅಸೆಂಡ್ ಏವಿಯೇಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಶ್ರೀ ಎಂಟರ್‌ಪ್ರೈಸಸ್ ನಿರ್ಬಂಧಕ್ಕೊಳಗಾದ ಭಾರತೀಯ ಕಂಪನಿಗಳಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.