ADVERTISEMENT

ಚುಡಾಯಿಸಿದ ಹುಡುಗರಿಗೆ 'ಬುದ್ಧಿ ಕಲಿಸಿದ' 36 ವಿದ್ಯಾರ್ಥಿನಿಯರ ಮೇಲೆ ಹಲ್ಲೆ

ಬಿಹಾರ: ಕಸ್ತೂರಬಾ ಶಾಲೆಗೆ ನುಗ್ಗಿದ ಗೂಂಡಾಗಳ ಕೃತ್ಯ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2018, 5:01 IST
Last Updated 8 ಅಕ್ಟೋಬರ್ 2018, 5:01 IST
   

ಪಟ್ನಾ: ಕಿರುಕುಳ ನೀಡುವುದನ್ನು ವಿರೋಧಿಸಿದ 34 ಬಾಲಕಿಯರ ಮೇಲೆ ಗೂಂಡಾಗಳ ಗುಂಪೊಂದು ಹಲ್ಲೆ ನಡೆಸಿದ ಅಮಾನವೀಯ ಘಟನೆ ಸುಪೌಲ್ ಜಿಲ್ಲೆಯ ತ್ರಿವೇಣಿಗಂಜ್‌ನಲ್ಲಿ ನಡೆದಿದೆ.

ಪಟ್ಟಣದ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ ಈ ಘಟನೆ ನಡೆದಿದ್ದು, ಗಾಯಗೊಂಡಿರುವ ಬಾಲಕಿ
ಯರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ವಿವರ: ಕೆಲವು ಸ್ಥಳೀಯ ಯುವಕರು ಶಾಲೆ ಒಳಗೆ ನುಸುಳಲು ಯತ್ನಿಸಿದ್ದಾರೆ. ಅಲ್ಲದೇ, ಬಾಲಕಿಯರ ಕುರಿತಂತೆ ಶಾಲೆಯ ಗೋಡೆಯ ಮೇಲೆ ಅಶ್ಲೀಲವಾಗಿ ಬರೆದಿದ್ದಾರೆ. ಈ ಕೃತ್ಯವನ್ನು ಪ್ರತಿಭಟಿಸಿದ ಬಾಲಕಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ.

ADVERTISEMENT

ನಂತರ, ಬಾಲಕಿಯರು ಯುವಕರನ್ನು ಹಿಡಿದು, ಹೊಡೆದಾಗ, ಅವರು ಶಾಲೆಯಿಂದ ಕಾಲ್ಕಿತ್ತಿದ್ದಾರೆ. ಸುಮಾರು ಎರಡು ಗಂಟೆ ನಂತರ ತಮ್ಮ ಸ್ನೇಹಿತರು, ಸಂಬಂಧಿಗಳೊಂದಿಗೆ, ಬಡಿಗೆಗಳ ಸಮೇತ ಶಾಲೆಗೆ ನುಗ್ಗಿದ ಯುವಕರ ಗುಂಪು ಬಾಲಕಿಯರನ್ನು ಮನಬಂದಂತೆ ಥಳಿಸಿದೆ. ಇದಕ್ಕೆ ಪ್ರತಿರೋಧ ಒಡ್ಡಿದ ಶಿಕ್ಷಕರ ಮೇಲೂ ಗುಂಪು ಹಲ್ಲೆ ಮಾಡಿದೆ.

ಸುಪೌಲ್‌ನ ಸಂಸದೆ, ಕಾಂಗ್ರೆಸ್‌ನ ರಂಜಿತ್‌ ರಂಜನ್‌ ಆಸ್ಪತ್ರೆಗೆ ಭೇಟಿ ನೀಡಿ ಬಾಲಕಿಯರ ಆರೋಗ್ಯ ವಿಚಾರಿಸಿದರು. ‘12ಕ್ಕೂ ಹೆಚ್ಚು ಬಾಲಕಿಯರಿಗೆ ಗಂಭೀರ ಗಾಯಗಳಾಗಿದ್ದು, ಬಹುತೇಕ ಬಾಲಕಿಯರು ದೇಹದ ಒಳಗಾಗಿರುವ ಗಾಯಗಳಿಂದ ಬಳಲುತ್ತಿದ್ದಾರೆ’ ಎಂದಿದ್ದಾರೆ.

‘ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ’ ಎಂದು ಎಸ್‌ಡಿಒ ವಿನಯಕುಮಾರ್‌ ತಿಳಿಸಿದ್ದಾರೆ.

ಆರೋಪ: ಬಾಲಕಿಯರ ಮೇಲಿನ ಹಲ್ಲೆಯನ್ನು ಖಂಡಿಸಿರುವ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್‌, ಸರ್ಕಾರದ ವಿರುದ್ಧ ಸರಣಿ ಟ್ವೀಟ್‌ಗಳ ಮೂಲಕ ವಾಗ್ದಾಳಿ ನಡೆಸಿದ್ದಾರೆ.

‘ಮುಖ್ಯಮಂತ್ರಿ ನಿತೀಶ್‌ಕುಮಾರ್‌ ಅವರು ಗೂಂಡಾಗಳಿಗೆ ಸಂಪೂರ್ಣ ಶರಣಾಗಿದ್ದಾರೆ ಹಾಗೂ ಉಪಮುಖ್ಯಮಂತ್ರಿ ಕ್ರಿಮಿನಲ್‌ಗಳ ದಯಾಭಿಕ್ಷೆಗಾಗಿ ಬಾಗಿ ನಿಂತಿದ್ದಾರೆ’ ಎಂದು ಅವರು ಹರಿಹಾಯ್ದಿದ್ದಾರೆ.

‘ರಾಜ್ಯದಲ್ಲಿ ವರದಿಯಾಗಿರುವ ಮಹಿಳೆಯರಿಗೆ ಕಿರುಕುಳ ನೀಡಿದ ಪ್ರಕರಣಗಳಲ್ಲಿ ಬಹುತೇಕ ಆರೋಪಿಗಳು ಮುಖ್ಯಮಂತ್ರಿಗಳ ಪಕ್ಷದವರೇ ಆಗಿದ್ದಾರೆ. ಇಂತಹ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಲು ಯತ್ನಿಸುವ ಪ್ರಾಮಾಣಿಕ ಪೊಲೀಸ್‌ ಅಧಿಕಾರಿಗಳಿಗೆ ವರ್ಗಾವಣೆ ಶಿಕ್ಷೆ ನೀಡಲಾಗುತ್ತಿದೆ’ ಎಂದೂ ಟ್ವೀಟ್‌ನಲ್ಲಿ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.