
ಲಖನೌ: ಪರೋಕ್ಷವಾದ ಸಂದೇಶಗಳು ಕೂಡ ಧರ್ಮ ಮತ್ತು ಸಮುದಾಯಗಳ ನಡುವೆ ದ್ವೇಷ ಭಾವನೆಯನ್ನು ಮೂಡಿಸಬಹುದು ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ತಮ್ಮ ಸಹೋದರನ ಬಂಧನವನ್ನು ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಸಂದೇಶ ಕಳುಹಿಸಿದ ಕಾರಣಕ್ಕೆ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಆರೀಫ್ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಜೆ.ಜೆ ಮುಮೀರ್ ಮತ್ತು ಪ್ರಮೋದ್‌ಕುಮಾರ್ ಶ್ರೀವಾಸ್ತವ ಅವರ ಪೀಠ ವಜಾಗೊಳಿಸಿದೆ.
‘ಪ್ರಕರಣದಲ್ಲಿ ಉಲ್ಲೇಖಿಸಿರುವ ಪೋಸ್ಟ್‌ನಲ್ಲಿ ಧರ್ಮದ ಬಗ್ಗೆ ಪ್ರಸ್ತಾಪಿಸಿಲ್ಲ. ಆದರೆ ನಿರ್ದಿಷ್ಟ ಧರ್ಮಕ್ಕೆ ಸೇರಿದವರು ಎಂಬ ಕಾರಣಕ್ಕೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಪರೋಕ್ಷವಾಗಿ ಹೇಳಲಾಗಿದೆ’ ಎಂದು ನ್ಯಾಯಾಲಯ ತಿಳಿಸಿದೆ.
‘ಈ ಸಂದೇಶವು ಒಂದು ಸಮುದಾಯದ ಭಾವನೆಗಳನ್ನು ಕೆರಳಿಸುತ್ತದೆ. ನಿರ್ದಿಷ್ಟ ಧರ್ಮಕ್ಕೆ ಸೇರಿದವರು ಎಂಬ ಕಾರಣಕ್ಕೆ ನಮ್ಮನ್ನು ಗುರಿಯಾಗಿಸಲಾಗುತ್ತಿದೆ ಎಂಬ ಭಾವನೆ ಅವರಲ್ಲಿ ಮೂಡುತ್ತದೆ’ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
‘ಈ ಪ್ರಕರಣದಲ್ಲಿ ತನಿಖೆ ಅಗತ್ಯವಾಗಿದ್ದು, ಆರಂಭಿಕ ಹಂತದಲ್ಲಿಯೇ ತಡೆ ಒಡ್ಡಲು ಸಾಧ್ಯವಿಲ್ಲ. ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲೇಬೇಕು’ ಎಂದು ನ್ಯಾಯಾಲಯ ತಿಳಿಸಿದೆ.
ಕೋಮುದ್ವೇಷವನ್ನು ಉತ್ತೇಜಿಸುವ ಮತ್ತು ಅಶಾಂತಿಯನ್ನು ಸೃಷ್ಟಿಸುವ ಸಲುವಾಗಿ ಆರೀಫ್ ಅವರು ಬಿಜ್ನೋರ್‌ನ ಚಾಂದ್‌ಪುರದ ಸ್ಥಳೀಯರ ಮೊಬೈಲ್ ಫೋನ್‌ಗಳಿಗೆ ಪ್ರಚೋದನಾಕಾರಿ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಪ್ರಾಸಿಕ್ಯೂಷನ್ ಆರೋಪಿಸಿದೆ.
‘ಆರೀಫ್ ಅವರ ಸಂದೇಶದಲ್ಲಿ ಯಾವುದೇ ಪ್ರಚೋದನಕಾರಿ ಪದಗಳಿರಲಿಲ್ಲ. ಅವರು ಕೇವಲ ಸಹೋದರನ ಬಂಧನದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು’ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.