ADVERTISEMENT

Digital Address | ಇಂದೋರ್‌: ಪ್ರತಿ ಮನೆಗೆ ಡಿಜಿಟಲ್‌ ವಿಳಾಸ

ಪಿಟಿಐ
Published 30 ಜೂನ್ 2025, 13:57 IST
Last Updated 30 ಜೂನ್ 2025, 13:57 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಇಂದೋರ್‌: ಮಧ್ಯಪ್ರದೇಶದ ಇಂದೋರ್ ಮಹಾನಗರ ಪಾಲಿಕೆಯು, ಪ್ರತಿ ಮನೆಗೂ ಪ್ರತ್ಯೇಕ ಡಿಜಿಟಲ್‌ ವಿಳಾಸವನ್ನು ನೀಡುವ ಪ್ರಾಯೋಗಿಕ ಯೋಜನೆಗೆ ಭಾನುವಾರ ಚಾಲನೆ ನೀಡಿದೆ. ಇದು ದೇಶದಲ್ಲೇ ಮೊದಲ ಪ್ರಯತ್ನವಾಗಿದೆ. 

ಈ ಯೋಜನೆಯಡಿ ನಗರದ ಪ್ರತಿಯೊಂದು ಮನೆಯ ಹೊರಗೆ ಭಿನ್ನ ಕ್ಯೂಆರ್ ಕೋಡ್ ಹೊಂದಿರುವ ಜಿಪಿಎಸ್‌ ಆಧಾರಿತ ಡಿಜಿಟಲ್‌ ಪ್ಲೇಟ್‌ಗಳನ್ನು ಅಳವಡಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು. 

ಸುಧಾಮ ನಗರದ 82ನೇ ವಾರ್ಡ್‌ನಲ್ಲಿ ಪ್ರಾಯೋಗಿಕವಾಗಿ ಯೋಜನೆಯನ್ನು ಭಾನುವಾರ ಆರಂಭಿಸಲಾಯಿತು. ನಾಗರಿಕ ಸೇವೆಗಳನ್ನು ಡಿಜಿಟಲ್‌ ತಂತ್ರಜ್ಞಾನದ ಜೊತೆ ಬೆಸೆಯುವ ಮೂಲಕ ‘ಸ್ಮಾರ್ಟ್‌’ ಆಡಳಿತವನ್ನು ಸಬಲೀಕರಣಗೊಳಿಸುವ ಗುರಿಯೊಂದಿಗೆ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು. 

ADVERTISEMENT

‘ಡಿಜಿಟಲ್‌ ವಿಳಾಸ ಯೋಜನೆಯನ್ನು, ಕೇಂದ್ರ ಸರ್ಕಾರದ ಡಿಜಿಪಿನ್‌ (ಡಿಜಿಟಲ್‌ ಪೋಸ್ಟಲ್‌ ಇಂಡೆಕ್ಸ್ ನಂಬರ್‌) ವ್ಯವಸ್ಥೆಯೊಂದಿಗೆ ಜೋಡಣೆ ಮಾಡಿದ್ದೇವೆ. ದೇಶದಲ್ಲಿ ಇಂಥದ್ದೊಂದು ಪ್ರಯತ್ನ ಮಾಡಿದ ಮೊದಲ ನಗರ ಇಂದೋರ್‌ ಆಗಿದೆ’ ಎಂದು ಮೇಯರ್ ಪುಷ್ಯಮಿತ್ರ ಭಾರ್ಗವ ಹೇಳಿದರು. 

ಮೊಬೈಲ್ ಫೋನ್‌ನಿಂದ ಈ ಕ್ಯೂಆರ್ ಕೋಡ್‌ ಅನ್ನು ಸ್ಕ್ಯಾನ್‌ ಮಾಡುವ ಮೂಲಕ ಮನೆಯ ಡಿಜಿಟಲ್‌ ವಿಳಾಸವನ್ನು ತಿಳಿದುಕೊಳ್ಳಬಹುದು. ಆಸ್ತಿ ಹಾಗೂ ನೀರಿನ ತೆರಿಗೆ ಸೇರಿದಂತೆ ಸ್ಥಳೀಯ ತೆರಿಗೆಗಳನ್ನು ಈ ಮೂಲಕ ಪಾವತಿಸಬಹುದು. ನಾಗರಿಕ ಸೇವೆ ಸೌಲಭ್ಯಗಳ ಕುರಿತು ದೂರುಗಳನ್ನೂ ಸಲ್ಲಿಸಬಹುದಾಗಿದೆ. 

ಜನರ ಸಲಹೆಗಳ ಮೇರೆಗೆ ಈ ಯೋಜನೆಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಲಾಗುವುದು ಎಂದು ಭಾರ್ಗವ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.