ADVERTISEMENT

ತಾಯ್ತನದ ಅವಧಿಯಲ್ಲಿ ಪ್ರತಿ ಗರ್ಭಿಣಿ ಘನತೆಯಿಂದಿರಲು ಅರ್ಹಳು: ದೆಹಲಿ ಹೈಕೋರ್ಟ್

ದೆಹಲಿ ಹೈಕೋರ್ಟ್ ಅಭಿಮತ * ಗರ್ಭಿಣಿಗೆ ಮಧ್ಯಂತರ ಜಾಮೀನು ಮಂಜೂರು

ಪಿಟಿಐ
Published 20 ಆಗಸ್ಟ್ 2022, 13:26 IST
Last Updated 20 ಆಗಸ್ಟ್ 2022, 13:26 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ‘ತಾಯ್ತನದ ಅವಧಿಯಲ್ಲಿ ಪ್ರತಿ ಗರ್ಭಿಣಿಯೂ ಘನತೆ ಮತ್ತು ಗೌರವದಿಂದ ಇರಲು ಅರ್ಹಳು ಎಂಬುದನ್ನು ನಮ್ಮ ಸಂವಿಧಾನವು ಖಾತ್ರಿ ನೀಡುತ್ತದೆ’ ಎಂದು ದೆಹಲಿ ಹೈಕೋರ್ಟ್ ಹೇಳಿದೆ.

ಅಪಹರಣ ಮತ್ತು ಕೊಲೆ ಯತ್ನದ ಪ್ರಕರಣವೊಂದರ ವಿಚಾರಣೆ ವೇಳೆ ಅರ್ಜಿದಾರರಾದ ಗರ್ಭಿಣಿಯೊಬ್ಬರಿಗೆ ಮೂರು ತಿಂಗಳ ಅವಧಿಯ ಮಧ್ಯಂತರ ಜಾಮೀನು ನೀಡುವ ಸಂದರ್ಭದಲ್ಲಿ ನ್ಯಾಯಮೂರ್ತಿ ಅನೂಪ್ ಕುಮಾರ್ ಮೆಂಡಿರಟ್ಟ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಗರ್ಭಾವಸ್ಥೆ ಅವಧಿಯು ಪ್ರತಿ ಮಹಿಳೆಗೂ ವಿಶೇಷ ಸಂದರ್ಭವಾಗಿದ್ದು, ಅದನ್ನು ಪ್ರಶಂಸಿಸಬೇಕಾಗಿದೆ. ಆದರೆ, ಬಂಧನದಲ್ಲಿರುವಾಗ ಮಗುವಿಗೆ ಜನ್ಮ ನೀಡುವುದು ತಾಯಿಗೆ ಆಘಾತವನ್ನುಂಟು ಮಾಡುತ್ತದೆ. ಅಷ್ಟೇ ಅಲ್ಲ, ಮಗುವಿನ ಜನನದ ಪ್ರಶ್ನೆ ಬಂದಾಗಲೆಲ್ಲಾ ಅದು ಮಗುವಿನ ಮೇಲೂ ಶಾಶ್ವತವಾದ ಪ್ರತಿಕೂಲ ಪರಿಣಾಮ ಬೀರುತ್ತದೆ. ಭಾರತದ ಸಂವಿಧಾನದ ಕಲಂ 21ರ ಅಡಿಯಲ್ಲಿ ಹೇಳಿರುವಂತೆ, ತಾಯ್ತನದ ಅವಧಿಯಲ್ಲಿ ಪ್ರತಿ ಗರ್ಭಿಣಿಯೂ ಘನತೆ ಮತ್ತು ಗೌರವದಿಂದ ಇರಲು ಅರ್ಹಳಾಗಿದ್ದಾಳೆ’ ಎಂದೂ ನ್ಯಾಯಾಲಯವು ಆಗಸ್ಟ್ 18ರ ತನ್ನ ಆದೇಶದಲ್ಲಿ ಹೇಳಿದೆ.

ADVERTISEMENT

‘ಸಾಧ್ಯವಾದಷ್ಟೂ ಜೈಲಿನ ಹೊರಗಿನ ಆಸ್ಪತ್ರೆಗಳಲ್ಲಿ ಮಹಿಳಾ ಕೈದಿಗಳಿಗೆ ಹೆರಿಗೆ ಮಾಡಲು ಸಾಧ್ಯವಾಗುವಂತೆ ತಾತ್ಕಾಲಿಕ ವ್ಯವಸ್ಥೆ ಮಾಡುವ ಬಗ್ಗೆ ಜೈಲಿನ ನಿಯಮಗಳು ಹೇಳುತ್ತವೆ. ವೈದ್ಯಕೀಯ ವರದಿಯ ಪ್ರಕಾರ, ಸಂಬಂಧಪಟ್ಟ ಜೈಲಿನಲ್ಲಿ ಹೆರಿಗೆ ಸೌಲಭ್ಯಗಳು ಲಭ್ಯವಿಲ್ಲ ಹಾಗೂ ಅರ್ಜಿದಾರ ಮಹಿಳೆಯನ್ನು ಹೆರಿಗೆಗಾಗಿ ದೀನ್‌ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ಕಳುಹಿಸಲಾಗುವುದು’ ಎಂಬುದನ್ನೂ ನ್ಯಾಯಾಲಯವು ವಿಚಾರಣೆ ವೇಳೆ ಗಮನಿಸಿತು.

‘ಅರ್ಜಿದಾರ ಮಹಿಳೆ ಗರ್ಭಿಣಿಯಾಗಿರುವುದರಿಂದ ಮತ್ತು ಹೆರಿಗೆಯ ನಿರೀಕ್ಷೆಯಲ್ಲಿರುವುದರಿಂದ ₹ 20 ಸಾವಿರ ವೈಯಕ್ತಿಕ ಬಾಂಡ್ ಒದಗಿಸಬೇಕು. ಬಿಡುಗಡೆಯಾದ ದಿನಾಂಕದಿಂದ ಮೂರು ತಿಂಗಳ ಅವಧಿಗೆ ಮಧ್ಯಂತರ ಜಾಮೀನಿಗೆ ಅರ್ಹರಾಗಿದ್ದಾರೆ’ ಎಂದು ನ್ಯಾಯಾಲಯವು ಆದೇಶ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.