ADVERTISEMENT

ಇವಿಎಂನಲ್ಲಿ ಅಭ್ಯರ್ಥಿಗಳ ಕಲರ್ ಫೋಟೊ: ಚುನಾವಣಾ ಆಯೋಗದ ಹೊಸ ಬದಲಾವಣೆ

ಪಿಟಿಐ
Published 17 ಸೆಪ್ಟೆಂಬರ್ 2025, 13:12 IST
Last Updated 17 ಸೆಪ್ಟೆಂಬರ್ 2025, 13:12 IST
ಚುನಾವಣಾ ಆಯೋಗ
ಚುನಾವಣಾ ಆಯೋಗ   

ನವದೆಹಲಿ: ಮುಂಬರುವ ಬಿಹಾರ ವಿಧಾನಸಭೆ ಚುನಾವಣೆ ವೇಳೆ, ವಿದ್ಯುನ್ಮಾನ ಮತಯಂತ್ರಗಳಲ್ಲಿ (ಇವಿಎಂ) ಅಭ್ಯರ್ಥಿಗಳ ಬಣ್ಣದ ಭಾವಚಿತ್ರಗಳು ಇರಲಿವೆ. ಇದೇ ಮೊದಲ ಬಾರಿಗೆ ಇಂತಹ ಕ್ರಮಕ್ಕೆ ಚುನಾವಣಾ ಆಯೋಗ ಮುಂದಾಗಿದೆ.

ಲೋಕಸಭೆ ಮತ್ತು ವಿಧಾನಸಭೆಗಳಿಗೆ ನಡೆಯುವ ಸಾರ್ವತ್ರಿಕ ಹಾಗೂ ಉಪಚುನಾವಣೆಗಳಲ್ಲಿ ಬಳಸಲಾಗುವ ಅಭ್ಯರ್ಥಿಗಳ ಭಾವಚಿತ್ರವುಳ್ಳ ಇವಿಎಂ ಮತಪತ್ರದ ಮುದ್ರಣ ಹಾಗೂ ವಿನ್ಯಾಸಕ್ಕೆ ಸಂಬಂಧಿಸಿ ಎಲ್ಲ ಮುಖ್ಯ ಚುನಾವಣಾ ಅಧಿಕಾರಿಗಳಿಗೆ (ಸಿಇಒ) ಚುನಾವಣಾ ಆಯೋಗ ಮಾರ್ಗಸೂಚಿಗಳನ್ನು ಬುಧವಾರ ಒದಗಿಸಿದೆ.

ಪ್ರಸ್ತುತ ಜಾರಿಯಲ್ಲಿರುವ ಮಾರ್ಗಸೂಚಿಗಳನ್ನು, ಚುನಾವಣೆ ನಿರ್ವಹಣೆ ನಿಯಮಗಳು–1961ರ ನಿಯಮ 49ಬಿ ಅಡಿ ಚುನಾವಣಾ ಆಯೋಗವು ಪರಿಷ್ಕರಿಸಿದೆ.

ಮಾರ್ಗಸೂಚಿಗಳು

  • ಇವಿಎಂ ಮತಪತ್ರದಲ್ಲಿ ಅಭ್ಯರ್ಥಿಗಳ ಬಣ್ಣದ ಭಾವಚಿತ್ರಗಳನ್ನು ಪ್ರಕಟಿಸಲಾಗುವುದು. ಒಂದು ವೇಳೆ ಅಭ್ಯರ್ಥಿಯು ಕಪ್ಪು–ಬಿಳುಪಿನ ಭಾವಚಿತ್ರ ನೀಡಿದ್ದಲ್ಲಿ ಅದನ್ನೇ ಮುದ್ರಿಸಲಾಗುವುದು * ಭಾವಚಿತ್ರದ ಅಳತೆ 2 ಸೆಂ.ಮೀ X2.5 ಸೆಂ.ಮೀ ಇರಲಿದೆ

  • ಮತಪತ್ರದ ಒಂದು ಹಾಳೆಯಲ್ಲಿ 15ಕ್ಕಿಂತ ಹೆಚ್ಚು ಅಭ್ಯರ್ಥಿಗಳ ಹೆಸರುಗಳು ಇರುವಂತಿಲ್ಲ. ನೋಟಾ ಆಯ್ಕೆಯು ಕೊನೆಗೆ ಇರಲಿದೆ

  • ನೋಟಾ ಹಾಗೂ ಅಭ್ಯರ್ಥಿಗಳ ಸಂಖ್ಯೆ 16ಕ್ಕಿಂತ ಕಡಿಮೆ ಇದ್ದಲ್ಲಿ ಪ್ಯಾನೆಲ್‌ನಲ್ಲಿನ ಕೊನೆಯ ಸ್ಥಳವನ್ನು ಖಾಲಿ ಬಿಡಲಾಗುವುದು 

  • ಅಭ್ಯರ್ಥಿಗಳ ಚಿತ್ರ ಉತ್ತಮವಾಗಿ ಗೋಚರವಾಗಬೇಕು ಎಂಬ ದೃಷ್ಟಿಯಿಂದ ಭಾವಚಿತ್ರಕ್ಕೆ ಮೀಸಲಾದ ಜಾಗದ ನಾಲ್ಕನೇ ಮೂರರಷ್ಟು ಸ್ಥಳದಲ್ಲಿ ಅಭ್ಯರ್ಥಿಯ ಮುಖ ಸ್ಪಷ್ಟವಾಗಿ ಕಾಣುವಂತೆ ಮುದ್ರಿಸಲಾಗುವುದು

  • ಅಭ್ಯರ್ಥಿಗಳ ಅನುಕ್ರಮ ಸಂಖ್ಯೆ/ನೋಟಾವನ್ನು ಭಾರತೀಯ ಅಂಕಿಗಳಲ್ಲಿಯೇ ಮುದ್ರಿಸಲಾಗುವುದು. ಅಕ್ಷರಗಳ ಫಾಂಟ್‌ ಗಾತ್ರ 30ರಷ್ಟು ಇರಲಿದ್ದು ದಪ್ಪ ಅಕ್ಷರಗಳನ್ನು ಬಳಸಲಾಗುವುದು

  • ಅಭ್ಯರ್ಥಿಗಳ ಹೆಸರುಗಳ ಅಕ್ಷರಗಳ ಫಾಂಟ್‌ ಗಾತ್ರ ಕೂಡ 30 ಇರಲಿದೆ

  • ಚುನಾವಣಾ ಆಯೋಗದಿಂದ ಯಾವುದೇ ನಿರ್ದಿಷ್ಟ ಸೂಚನೆ ಇಲ್ಲದ ಹೊರತು ಲೋಕಸಭಾ ಚುನಾವಣೆಯ ಮತಪತ್ರವನ್ನು ಬಿಳಿ ಕಾಗದದಲ್ಲಿ ಮತ್ತು ವಿಧಾನಸಭೆಗಳ ಚುನಾವಣೆಯ ಮತಪತ್ರವನ್ನು ಗುಲಾಬಿ ಬಣ್ಣದ ಕಾಗದದಲ್ಲಿ ಮುದ್ರಿಸಲಾಗುವುದು

  • ಇವಿಎಂ ಮತಪತ್ರಗಳನ್ನು ಸರ್ಕಾರಿ ಇಲ್ಲವೇ ಅರೆಸರ್ಕಾರಿ ಮುದ್ರಣಾಲಯಗಳಲ್ಲಿ ಮುದ್ರಿಸಲಾಗುವುದು. ಒಂದು ವೇಳೆ ಇಂತಹ ಮುದ್ರಣಾಲಯಗಳು ಲಭ್ಯ ಇಲ್ಲದಿದ್ದಲ್ಲಿ ಅಗತ್ಯ ಸಾಮರ್ಥ್ಯವಿರುವ ಖಾಸಗಿ ಮುದ್ರಣಾಲಯಗಳನ್ನು ಆಯ್ಕೆ ಮಾಡಲಾಗುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.