ADVERTISEMENT

ಅಸ್ಸಾಂ: ಇವಿಎಂ ಜೊತೆ ಬಿಜೆಪಿ ಅಭ್ಯರ್ಥಿ ಕಾರಿನಲ್ಲಿ ಕುಳಿತ 4 ಅಧಿಕಾರಿಗಳು ಅಮಾನತು

ಏಜೆನ್ಸೀಸ್
Published 2 ಏಪ್ರಿಲ್ 2021, 8:10 IST
Last Updated 2 ಏಪ್ರಿಲ್ 2021, 8:10 IST
ಚುನಾವಣಾ ಆಯೋಗ ಮತ್ತು ಕಾರಿನಲ್ಲಿ ಸಿಕ್ಕ ಇವಿಎಂಗಳು
ಚುನಾವಣಾ ಆಯೋಗ ಮತ್ತು ಕಾರಿನಲ್ಲಿ ಸಿಕ್ಕ ಇವಿಎಂಗಳು   

ನವದೆಹಲಿ: ಅಸ್ಸಾಂನಲ್ಲಿ ಬಿಜೆಪಿ ಅಭ್ಯರ್ಥಿಯೊಬ್ಬರ ಕಾರಿನಲ್ಲಿ ಇವಿಎಂಗಳನ್ನು ಸಾಗಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಶುಕ್ರವಾರ ನಾಲ್ವರು ಮತಗಟ್ಟೆ ಅಧಿಕಾರಿಗಳನ್ನು ಅಮಾನತು ಮಾಡಿದೆ.

ಗುರುವಾರ ಎರಡನೇ ಹಂತದ ಮತದಾನ ಮುಕ್ತಾಯವಾದ ಬಳಿಕ ಮತಗಟ್ಟೆ ಅಧಿಕಾರಿಗಳು ಇವಿಎಂ ಯಂತ್ರಗಳನ್ನು ಅಧಿಕೃತ ವಾಹನದಲ್ಲಿ ಸಾಗಿಸುವಾಗ ಅಡಚಣೆ ಎದುರಾಗಿದೆ. ಅವರ ಕಾರು ಮಾರ್ಗ ಮಧ್ಯೆ ಕೆಟ್ಟು ನಿಂತಿದ್ದರಿಂದ ಅಧಿಕಾರಿಗಳು ಹಿಂದೆ ಬರುತ್ತಿದ್ದ ವಾಹನದ ಸಹಾಯ ಕೋರಿ, ಆ ವಾಹನದಲ್ಲಿ ಸಂಚಾರ ಮುಂದುವರಿಸಿದ್ದರು ಎಂದು ವರದಿಯಾಗಿದೆ.

ನಿನ್ನೆ ರಾತ್ರಿಯಿಂದ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ಹರಿದಾಡುತ್ತಿದ್ದು, ಪಥರ್‌ಕಾಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೃಷ್ಣೆಂದು ಪೌಲ್‌ ಅವರಿಗೆ ಸೇರಿದ ಕಾರಿನಲ್ಲಿ ಇವಿಎಂಗಳನ್ನು ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಕಾರನ್ನು ಸ್ಥಳೀಯ ಜನರ ಗುಂಪು ಹಿಡಿದು ನಿಲ್ಲಿಸಿ, ಚಾಲಕನ್ನು ಪ್ರಶ್ನಿಸಿತ್ತು. ಘಟನೆಯಲ್ಲಿ ಇವಿಎಂಗಳಿಗೆ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.

ADVERTISEMENT

'ಸಾರಿಗೆ ಶಿಷ್ಟಾಚಾರದ ಉಲ್ಲಂಘನೆಗಾಗಿ ಮತಗಟ್ಟೆ ಅಧಿಕಾರಿಗೆ ಷೊಕಾಸ್‌ ನೋಟಿಸ್‌ ಜಾರಿ ಮಾಡಲಾಗಿದೆ. ಮತಗಟ್ಟೆ ಅಧಿಕಾರಿ ಮತ್ತು ಇತರೆ ಮೂವರು ಸಿಬ್ಬಂದಿಯನ್ನು ಅಮಾನತಿನಲ್ಲಿಡಲಾಗಿದೆ. ಇವಿಎಂಗಳಿಗೆ ಯಾವುದೇ ಹಾನಿಯಾಗದಿದ್ದರೂ, ಮತಗಟ್ಟ ಸಂಖ್ಯೆ 149ರಲ್ಲಿ ಮರುಮತದಾನ ನಡೆಸಲಾಗುತ್ತದೆ' ಎಂದು ಚುನಾವಣಾ ಆಯೋಗ ಹೇಳಿದೆ.

ಮತದಾನದ ನಂತರ ನಡೆದದ್ದೇನು?

ವರದಿ ಪ್ರಕಾರ, ಚುನಾವಣಾ ಆಯೋಗಕ್ಕೆ ಸೇರಿದ್ದ ಕಾರು ಕೆಟ್ಟಿತ್ತು ಹಾಗೂ ಅಧಿಕಾರಿಗಳು ಬೇರೊಂದು ವಾಹನದ ಸಹಕಾರ ಕೋರಿದ್ದರು. ಅದು ಬಿಜೆಪಿ ಅಭ್ಯರ್ಥಿಗೆ ಸೇರಿದ ಕಾರು ಎಂಬುದು ನಂತರವಷ್ಟೇ ಪತ್ತೆಯಾಗಿದೆ. ರಾತ್ರಿ ಸುಮಾರು 9.20ಕ್ಕೆ ಅಧಿಕಾರಿಗಳು ಸಾಗುತ್ತಿದ್ದ ಕಾರೊಂದನ್ನು ನಿಲ್ಲಿಸಿ ಸಹಾಯ ಕೇಳಿ, ಇವಿಎಂಗಳು ಮತ್ತು ಇತರೆ ವಸ್ತುಗಳನ್ನು ತೆಗೆದುಕೊಂಡು ಆ ವಾಹನದಲ್ಲಿ ಪ್ರಯಾಣಿಸಿದ್ದಾರೆ. ಆ ವಾಹನ ಯಾರಿಗೆ ಸೇರಿದ್ದು ಎಂಬುದನ್ನು ಅಧಿಕಾರಿಗಳು ಪರಿಶೀಲಿಸಿರಲಿಲ್ಲ.

ಮತಗಟ್ಟೆ 149–ಇಂದಿರಾ ಎಂವಿ ಸ್ಕೂಲ್‌ ಎಲ್‌ಎಸಿ 1 ರತಾಬಾರಿ (ಎಸ್‌ಸಿ) ವಲಯದಲ್ಲಿ ನಿಯೋಜನೆಯಾಗಿದ್ದ ಅಧಿಕಾರಿಗಳು ಅಮಾನತಗೊಂಡಿದ್ದಾರೆ. ಮತಗಟ್ಟೆ ಅಧಿಕಾರಿ ಮತ್ತು ಮೂವರು ಮತಗಟ್ಟೆ ಸಿಬ್ಬಂದಿ ಜೊತೆಗೆ ಪೊಲೀಸ್‌ ಕಾನ್‌ಸ್ಟೆಬಲ್‌ ಮತ್ತು ಹೋಂಗಾರ್ಡ್‌ ಇದ್ದರು ಎಂದು ಚುನಾವಣಾ ಆಯೋಗ ತಿಳಿಸಿದೆ.

ಖಾಸಗಿ ಕಾರಿನಲ್ಲಿ ಇವಿಎಂಗಳನ್ನು ಸಾಗಿಸುತ್ತಿರುವುದು ತಿಳಿದು ದೊಡ್ಡ ಗುಂಪು ಕಾರನ್ನು ತಡೆದು, ದಾಳಿ ಮಾಡಿದೆ ಹಾಗೂ ಕಾರಿನೊಂದಿಗೆ ಇವಿಎಂಗಳನ್ನು ಅವರು ವಶಕ್ಕೆ ಪಡೆದಿದ್ದಾರೆ. ರಾತ್ರಿ 9:45ಕ್ಕೆ ಈ ಘಟನೆ ನಡೆದಿದೆ. ಇವಿಎಂಗಳನ್ನು ಬದಲಿಸಲು ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ಗುಂಪು ಆರೋಪಿಸಿತ್ತು.

ಚುನಾವಣಾ ಆಯೋಗ ಇವಿಎಂ ಪರಿಶೀಲನೆ ನಡೆಸಿದ್ದು, ಬಿಯು, ಸಿಯು ಹಾಗೂ ವಿವಿಪ್ಯಾಟ್‌ ಸೀಲ್‌ ಆಗಿರುವ ರೂಪದಲ್ಲಿಯೇ ಕಂಡು ಬಂದಿದೆ, ಯಂತ್ರಗಳಿಗೆ ಯಾವುದೇ ಹಾನಿಯಾಗಿಲ್ಲ. ಎಲ್ಲವನ್ನೂ ಸ್ಟ್ರಾಂಗ್‌ ರೂಂಗೆ ತಲುಪಿಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.

ಅಧಿಕಾರಿಗಳು ವರದಿ ಸಲ್ಲಿಸಿರುವಂತೆ, ಅವರು ಕರಿಂಗಂಜ್‌ ಕಡೆಗೆ ಪ್ರಯಾಣಿಸಿದರು. ರಾತ್ರಿ ಸುಮಾರು 10:00ಕ್ಕೆ ಕರಿಂಗಂಜ್‌ನ ಕನೈಶಿಲ್‌ ಸಮೀಪ ಬಂದಾಗ ಟ್ರಾಫಿಕ್‌ನಲ್ಲಿ ಕಾರಿನ ವೇಗ ಕಡಿಮೆಯಾಯಿತು. ಅದೇ ಸಮಯದಲ್ಲಿ ಸುಮಾರು 50 ಜನರ ಗುಂಪು ಕಾರಿನ ಮೇಲೆ ಕಲ್ಲು ತೂರಿ ದಾಳಿ ನಡೆಸಿದರು ಎಂದಿದ್ದಾರೆ.

ಕಾರಿನ ಮೇಲೆ ದಾಳಿ ನಡೆದಿರುವ ಬಗ್ಗೆ ಎಫ್‌ಐಆರ್‌ ದಾಖಲು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.