ADVERTISEMENT

ಬಿಜೆಪಿಯ ಮಾಜಿ ಸಂಸದ, ಪತ್ರಕರ್ತ ಚಂದನ್‌ ಮಿತ್ರ ನಿಧನ

ಪಿಟಿಐ
Published 2 ಸೆಪ್ಟೆಂಬರ್ 2021, 5:26 IST
Last Updated 2 ಸೆಪ್ಟೆಂಬರ್ 2021, 5:26 IST
ಛಂದನ್‌ ಮಿತ್ರ
ಛಂದನ್‌ ಮಿತ್ರ   

ನವದೆಹಲಿ: ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬಿಜೆಪಿ ಮಾಜಿ ಸಂಸದ ಮತ್ತು ಖ್ಯಾತ ಪತ್ರಕರ್ತ ಚಂದನ್‌ ಮಿತ್ರ (65) ಬುಧವಾರ ತಡರಾತ್ರಿ ನಿಧನರಾಗಿದ್ದಾರೆ.

‘ನನ್ನ ತಂದೆಯವರು ಬುಧವಾರ ತಡರಾತ್ರಿ ನಿಧನರಾಗಿದ್ದಾರೆ. ಅವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು‘ ಎಂದು ಅವರ ಪುತ್ರ ‌ಕುಶನ್ ಮಿತ್ರ ಟ್ವೀಟ್ ಮಾಡಿದ್ದಾರೆ.

ರಾಜ್ಯಸಭಾ ಸದಸ್ಯರಾಗಿದ್ದ ಚಂದನ್‌ ಮಿತ್ರ, ಬಿಜೆಪಿಯ ಹಿರಿಯ ನಾಯಕರಾದ ವಾಜಪೇಯಿ ಮತ್ತು ಎಲ್‌.ಕೆ. ಅಡ್ವಾಣಿಯವರಿಗೆ ಆಪ್ತರಾಗಿದ್ದರು. ಹಲವು ವರ್ಷಗಳ ಕಾಲ ‘ಪಯೋನಿರ್‘ ಪತ್ರಿಕೆಯ ಸಂಪಾದಕರಾಗಿದ್ದರು.

ADVERTISEMENT

ಚಂದನ್‌ ಮಿತ್ರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ‘ಚಂದನ್‌ ಮಿತ್ರ ಅವರು ತಮ್ಮ ಬೌದ್ಧಿಕ ಶಕ್ತಿ ಹಾಗೂ ಒಳನೋಟಗಳಿಂದ ಜನಮಾನಸದಲ್ಲಿ ಉಳಿಯುತ್ತಾರೆ. ಇಂಥ ವೈಶಿಷ್ಟ್ಯದ ಮೂಲಕ ಮಾಧ್ಯಮ ಮತ್ತು ರಾಜಕೀಯ ಜಗತ್ತಿನಲ್ಲಿ ಗುರುತಿಸಿಕೊಂಡಿದ್ದರು. ಅವರ ನಿಧನದಿಂದ ತುಂಬಾ ಬೇಸರವಾಗಿದೆ. ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ಸಾಂತ್ವನ ಹೇಳುತ್ತೇನೆ. ಓಂ ಶಾಂತಿ‘ ಎಂದು ಪ್ರಧಾನಿಯವರು ಟ್ವೀಟ್‌ ಮಾಡಿದ್ದಾರೆ.

ಬಿಜೆಪಿ ಸಂಸದ ಸ್ವಪನ್‌ ದಾಸ್‌ಗುಪ್ತಾ ಅವರು ‘ನನ್ನ ಆತ್ಮೀಯ ಮಿತ್ರ, ಮಾಜಿ ಸಂಸದ ಚಂದನ್‌ ಮಿತ್ರನನ್ನು ಕಳೆದುಕೊಂಡಿದ್ದೇನೆ. ನಾವು ಶಾಲಾ ಹಂತದಿಂದಲೂ ಸಹಪಾಠಿಗಳು. ನಾವು ಲಾ ಮಾರ್ಟಿನಿಯರ್‌ ಶಾಲೆಯ ವಿದ್ಯಾರ್ಥಿಗಳು. ನಂತರ ಸೇಂಟ್‌ ಸ್ಟೀಫನ್ಸ್‌ ಮತ್ತು ಆಕ್ಸ್‌ಫರ್ಡ್‌ ಕಾಲೇಜಿನಲ್ಲೂ ಸಹಪಾಠಿಗಳಾಗಿದ್ದೆವು. ನಾವಿಬ್ಬರೂ ಒಟ್ಟಿಗೆ ಪತ್ರಿಕೋದ್ಯಮಕ್ಕೆ ಸೇರಿದ್ದೆವು‘ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಈ ಪೋಸ್ಟ್‌ನೊಂದಿಗೆ 1972ರ ಶಾಲಾ ಪ್ರವಾಸದ ಸಂದರ್ಭದಲ್ಲಿ ಚಂದನ್‌ ಮಿತ್ರ ಅವರೊಂದಿಗೆ ತೆಗೆಸಿಕೊಂಡಿದ್ದ ಛಾಯಾಚಿತ್ರವನ್ನು ಸ್ವಪನ್‌ ದಾಸ್‌ ಗುಪ್ತಾ ಟ್ಯಾಗ್‌ ಮಾಡಿ, ‘ನೀನು ಎಲ್ಲಿದ್ದರೂ ಸುಖವಾಗಿರು ಮಿತ್ರ‘ ಎಂದು ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.