ADVERTISEMENT

ಕೇಂದ್ರ ಮಾಜಿ ಸಚಿವ ರಾಜೀವ್ ಚಂದ್ರಶೇಖರ್ ಕೇರಳ ಬಿಜೆಪಿ ಅಧ್ಯಕ್ಷ

ಪಿಟಿಐ
Published 24 ಮಾರ್ಚ್ 2025, 9:40 IST
Last Updated 24 ಮಾರ್ಚ್ 2025, 9:40 IST
<div class="paragraphs"><p> ರಾಜೀವ್ ಚಂದ್ರಶೇಖರ್</p></div>

ರಾಜೀವ್ ಚಂದ್ರಶೇಖರ್

   

– ಪಿಟಿಐ ಚಿತ್ರ

ತಿರುವನಂತ‍ಪುರ: ಕೇಂದ್ರದ ಮಾಜಿ ಸಚಿವ ರಾಜೀವ್ ಚಂದ್ರಶೇಖರ್ ಅವರು ಕೇರಳ ಬಿಜೆಪಿಯ ನೂತನ ಅಧ್ಯಕ್ಷರಾಗಿ ಸೋಮವಾರ ಆಯ್ಕೆಯಾದರು.

ADVERTISEMENT

ತಿರುವನಂ‍ತ‍ಪುರದಲ್ಲಿ ನಡೆದ ಬಿಜೆಪಿ ರಾಜ್ಯ ಕೌನ್ಸಿಲ್ ಸಭೆಗೆ ಪಕ್ಷದ ಕೇಂದ್ರ ವೀಕ್ಷಕರಾಗಿ ಆಗಮಿಸಿದ್ದ ಪ್ರಲ್ಹಾದ ಜೋಶಿ ನೂತನ ಅಧ್ಯಕ್ಷರ ಘೋಷಣೆ ಮಾಡಿದರು.

ಅಧ್ಯಕ್ಷ ಹುದ್ದೆಗೆ ರಾಜೀವ್ ಚಂದ್ರಶೇಖರ್ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರು.

ಹೊಸ ಅಧ್ಯಕ್ಷರ ಘೋಷಣೆ ವೇಳೆ ನಿಕಟಪೂರ್ವ ಅಧ್ಯಕ್ಷ ಕೆ. ಸುರೇಂದ್ರನ್‌, ಬಿಜೆಪಿ ರಾಜ್ಯ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಸೇರಿ ಪ್ರಮುಖ ನಾಯಕರು ಹಾಜರಿದ್ದರು.

ಸುರೇಂದ್ರನ್ ಅವರು ಪಕ್ಷದ ಧ್ವಜವನ್ನು ಚಂದ್ರಶೇಖರ್‌ಗೆ ಹಸ್ತಾಂತರಿಸಿದರು.

ಸಭೆಯಲ್ಲಿ ಮಾತನಾಡಿದ ಸುರೇಂದ್ರನ್, ಕಳೆದ 10 ವರ್ಷಗಳಲ್ಲಿ ಕೇರಳದಲ್ಲಿ ಬಿಜೆಪಿ ಅಭೂತಪೂರ್ವ ಬೆಳವಣಿಗೆ ಕಂಡಿದೆ. ಚಂದ್ರಶೇಖರ್ ಅವರನ್ನು ‍‍ಪಕ್ಷದ ಎಲ್ಲಾ ನಾಯಕರು ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ. ವಿವಿಧ ವಲಯಗಳಲ್ಲಿ ಅನುಭವಿಯಾಗಿರುವ ಅವರು, ರಾಜ್ಯದಲ್ಲಿ ಬಿಜೆಪಿ ಬೆಳವಣಿಗೆಗೆ ವೇಗ ನೀಡಲಿದ್ದಾರೆ ಎಂದರು.

ಚಂದ್ರಶೇಖರ್ ಪಳಗಿದ ರಾಜಕಾರಣಿಯಲ್ಲ ಎನ್ನುವ ಆರೋಪವನ್ನು ತಳ್ಳಿ ಹಾಕಿದ ಸುರೇಂದ್ರನ್, ಅವರು ಹೊಸ ಜವಾಬ್ದಾರಿಯಲ್ಲಿ ಮಿಂಚಲಿದ್ದಾರೆ ಎಂದು ಹೇಳಿದರು.

60 ವರ್ಷದ ರಾಜೀವ್ ಚಂದ್ರಶೇಖರ್ ಮೂರು ಬಾರಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದವರು. ಬಿಜೆಪಿಯ ರಾಷ್ಟ್ರೀಯ ವಕ್ತಾರರಾಗಿ, ಕೇರಳ ಎನ್‌ಡಿಎ ಘಟಕದ ಉಪಾಧ್ಯಕ್ಷರಾಗಿ, ಕೇಂದ್ರದಲ್ಲಿ ಎಲೆಕ್ಟ್ರಾನಿಕ್ಸ್ ಹಾಗೂ ಐಟಿ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ, ಜಲಶಕ್ತಿ ಇಲಾಖೆಯ ರಾಜ್ಯ ಖಾತೆ ಸಚಿವರಾಗಿಯೂ ಕೆಲಸ ಮಾಡಿದ ಅನುಭವವಿದೆ.

ಕೇರಳದಲ್ಲಿ ಪರಿಚಿತ ಮುಖವಾಗಿರುವ ಚಂದ್ರಶೇಖರ್, 2024 ರ ಲೋಕಸಭಾ ಚುನಾವಣೆಯಲ್ಲಿ ತಿರುವನಂತಪುರಂನಿಂದ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಕಾಂಗ್ರೆಸ್ ನಾಯಕ ಶಶಿ ತರೂರ್ ವಿರುದ್ಧ 16,077 ಮತಗಳಿಂದ ಸೋಲನುಭವಿಸಿದ್ದರು.

ಗುಜರಾತ್‌ನ ಅಹಮದಾಬಾದ್‌ನಲ್ಲಿ ಕೇರಳ ಮೂಲದ ಪೋಷಕರಿಗೆ ಜನಿಸಿದ ಚಂದ್ರಶೇಖರ್ ಅವರ ಕುಟುಂಬದ ಮೂಲ ತ್ರಿಶೂರ್‌. ಅವರ ಮಾವ ಟಿಪಿಜಿ ನಂಬಿಯಾರ್, ಬಿಪಿಎಲ್ ಗ್ರೂಪ್‌ನ ಸಂಸ್ಥಾಪಕ.

ಕೆ. ಸುರೇಂದ್ರನ್ ಅವರು ರಾಜ್ಯ ಅಧ್ಯಕ್ಷರಾಗಿ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ್ದರಿಂದ ಈ ಚುನಾವಣೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.