ADVERTISEMENT

ತಿಹಾರ ಜೈಲಿನಲ್ಲೇ ವಿಚಾರಣೆ; ಸಿಬಿಐ ವಿರುದ್ಧ ದೆಹಲಿ ನ್ಯಾಯಾಲಯಕ್ಕೆ ಕವಿತಾ ಅರ್ಜಿ

ಪಿಟಿಐ
Published 6 ಏಪ್ರಿಲ್ 2024, 14:15 IST
Last Updated 6 ಏಪ್ರಿಲ್ 2024, 14:15 IST
ಕೆ. ಕವಿತಾ
ಕೆ. ಕವಿತಾ   

ನವದೆಹಲಿ: ತಿಹಾರ ಜೈಲಿನಲ್ಲಿಯೇ ತಮ್ಮನ್ನು ವಿಚಾರಣೆಗೆ ಒಳಪಡಿಸುವುದಾಗಿ ಸಿಬಿಐ ಸಲ್ಲಿಸಿರುವ ಅರ್ಜಿ ವಿರೋಧಿಸಿ ಬಿಆರ್‌ಎಸ್‌ ನಾಯಕಿ ಕೆ. ಕವಿತಾ ಅವರು ಶನಿವಾರ ದೆಹಲಿಯ ನ್ಯಾಯಾಲಯವೊಂದರ ಮೆಟ್ಟಿಲೇರಿದ್ದಾರೆ.‌

ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕವಿತಾ ಅವರು ಈಗ ತಿಹಾರ ಜೈಲಿನಲ್ಲಿದ್ದಾರೆ.

ನ್ಯಾಯಾಂಗ ಬಂಧನದಲ್ಲಿರುವ ಕವಿತಾ ಅವರನ್ನು ವಿಚಾರಣೆಗೆ ಒಳಪಡಿಸಲು ಅನುಮತಿ ನೀಡುವಂತೆ ಕೋರಿ ನ್ಯಾಯಾಲಯಕ್ಕೆ ಸಿಬಿಐ ಮನವಿ ಸಲ್ಲಿಸಿತ್ತು. ಅದರಂತೆ, ತಿಹಾರ ಜೈಲಿನಲ್ಲಿಯೇ ಕವಿತಾ ಅವರನ್ನು ವಿಚಾರಣೆಗೆ ಒಳಪಡಿಸಲು ನ್ಯಾಯಾಲಯವು ಸಿಬಿಐಗೆ ಶುಕ್ರವಾರ ಅನುಮತಿ ನೀಡಿತ್ತು.

ADVERTISEMENT

ಕವಿತಾ ಅವರ ಬೆನ್ನಹಿಂದೆ ಅರ್ಜಿ ಸಲ್ಲಿಸುವ ಮೂಲಕ ಸಿಬಿಐ ಕಾನೂನು ಪ್ರಕ್ರಿಯೆಗೆ ಅಡ್ಡಿಪಡಿಸುತ್ತಿದೆ ಎಂದು ನ್ಯಾಯಾಲಯದಲ್ಲಿ ಹಾಜರಿದ್ದ ಕವಿತಾ ಪರ ವಕೀಲರು ಹೇಳಿದರು. ಜೊತೆಗೆ, ಕವಿತಾ ಅವರ ಅರ್ಜಿ ವಿಚಾರಣೆ ನಡೆಯುವವರೆಗೆ ಸಿಬಿಐನ ಅರ್ಜಿಗೆ ಸಂಬಂಧಿಸಿ ಆದೇಶ ನೀಡದಂತೆ ಮನವಿ ಮಾಡಿದರು.

ಅರ್ಜಿಯ ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ಮುಂದಿನ ಶನಿವಾರ ನಡೆಸುವ ಸಾಧ್ಯತೆ ಇದೆ.

ಮಾರ್ಚ್‌ 15ರಂದು ಕವಿತಾ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.