ಪ್ರಾತಿನಿಧಿಕ ಚಿತ್ರ
ನೋಯ್ಡಾ (ಉತ್ತರ ಪ್ರದೇಶ): ಗ್ರೇಟರ್ ನೋಯ್ಡಾದ ಬಾದಲ್‌ಪುರ ಪ್ರದೇಶದಲ್ಲಿರುವ ರಾಸಾಯನಿಕ ಘಟಕದಲ್ಲಿ ಭಾನುವಾರ ಬೆಳಿಗ್ಗೆ ಸ್ಫೋಟ ಸಂಭವಿಸಿದ್ದು, ಭಾರಿ ಬೆಂಕಿ ಕಾಣಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿನ ದುಜಾನಾ ರಸ್ತೆಯಲ್ಲಿರುವ ಶ್ರೀ ಬಂಕೆ ಬಿಹಾರಿ ಕೆಮಿಕಲ್ ಪ್ಲಾಂಟ್‌ನಲ್ಲಿ ಅವಘಡ ಸಂಭವಿಸಿದೆ. ಕೂಡಲೇ ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಲಾಯಿತು. ಹತ್ತಕ್ಕೂ ಹೆಚ್ಚು ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿರುವ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದಿದ್ದಾರೆ.
ರಾಸಾಯನಿಕ ಘಟಕದಲ್ಲಿ ಭಾರಿ ಸ್ಫೋಟ ಸಂಭವಿಸಿದ ಬಳಿಕ ಬೆಂಕಿ ಕಾಣಿಸಿಕೊಂಡಿತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಡಿಸಿಪಿ ಶಕ್ತಿ ಮೋಹನ್ ಅವಸ್ಥಿ ಅವರು, 'ಬಾದಲ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ದುಜಾನಾ ರಸ್ತೆಯಲ್ಲಿರುವ ಶ್ರೀ ಬಂಕೆ ಬಿಹಾರಿ ಕೆಮಿಕಲ್ ಪ್ಲಾಂಟ್‌ನಲ್ಲಿ ಅವಘಡ ಸಂಭವಿಸಿರುವ ಬಗ್ಗೆ ಗೊತ್ತಾಯಿತು. ತಕ್ಷಣವೇ ಕ್ರಮ ಕೈಗೊಂಡು ಅಗ್ನಿಶಾಮಕ ದಳವನ್ನು ಸ್ಥಳಕ್ಕೆ ನಿಯೋಜಿಸಿದ್ದೇವೆ. ಎರಡು ಡಜನ್‌ಗೂ ಹೆಚ್ಚು ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ನಿಯಂತ್ರಿಸುವ ಪ್ರಯತ್ನ ಮುಂದುವರಿಸಿವೆ' ಎಂದು ತಿಳಿಸಿದ್ದಾರೆ.
ಘಟನೆಯಲ್ಲಿ ಸಾವು–ನೋವು ಸಂಭವಿಸಿರುವ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿಲ್ಲ. ಆದರೆ, ಯಾರಿಗೂ ತೊಂದರೆಯಾಗಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.