ADVERTISEMENT

ಸ್ಫೋಟಕ ಸಂಗ್ರಹ: ಹಿಂದೂ ಗೋವಂಶ್‌ ರಕ್ಷಾ ಸಮಿತಿಯ ವೈಭವ್‌ ರಾವತ್‌ ಬಂಧನ

ಪಿಟಿಐ
Published 10 ಆಗಸ್ಟ್ 2018, 16:56 IST
Last Updated 10 ಆಗಸ್ಟ್ 2018, 16:56 IST
ವೈಭವ್‌ ರಾವತ್‌
ವೈಭವ್‌ ರಾವತ್‌   

ಮುಂಬೈ:ಮಹಾರಾಷ್ಟ್ರದ ಪಾಲ್ಗರ್‌ ಜಿಲ್ಲೆಯ ನಲ್ಲಸೊಪರ ಊರಿನ ಮನೆಯಲ್ಲಿ ಸ್ಫೋಟಕ ಸಾಮಗ್ರಿ ಸಂಗ್ರಹಣೆಯ ಆರೋಪದ ಮೇಲೆ ಬಲಪಂಥೀಯ ಸಂಘಟನೆಯ ಸದಸ್ಯನೊಬ್ಬನನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್‌) ಬಂಧಿಸಿದೆ.

ವೈಭವ್‌ ರಾವತ್‌ ಬಂಧಿತ ಆರೋಪಿ. ಈತ ಹಿಂದೂ ಗೋವಂಶ ರಕ್ಷಾ ಸಮಿತಿಯ ಸದಸ್ಯನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಎಟಿಎಸ್‌ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯ ಮನೆ ಮತ್ತು ಅಂಗಡಿಯನ್ನು ಜಾಲಾಡಿದಾಗ, ಕಚ್ಚಾ ಬಾಂಬ್‌ಗಳು ಸೇರಿದಂತೆ ಅಪಾರ ಪ್ರಮಾಣದ ಸ್ಫೋಟಕ ಸಾಮಗ್ರಿಗಳು ಸಿಕ್ಕಿವೆ. ಜತೆಗೆ ಕೆಲವು ಕರಪತ್ರಗಳು ಇದ್ದವು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಎಟಿಎಸ್‌ ಆರೋಪಿಯನ್ನ ಬಂಧಿಸಿ, ಹೆಚ್ಚಿನ ವಿಚಾರಣೆಗಾಗಿ ಮುಂಬೈಗೆ ಕರೆತಂದಿದೆ.

ಹಿಂದೂ ಜನಜಾಗೃತಿ ಸಮಿತಿಯು(ಎಚ್‌ಜೆಎಸ್) ರಾವತ್‌ ಬಂಧನವನ್ನು ‘ಮಾಲೆಗ್ಹಾಂವ್‌ ಭಾಗ–2’ ಎಂದು ಬಣ್ಣಿಸಿ, ಪ್ರಕಟಣೆಯನ್ನು ಹೊರಡಿಸಿದೆ.

2008ರ ಸೆಪ್ಟೆಂಬರ್‌ 29ರಂದು ನಾಸಿಕ್‌ ಜಿಲ್ಲೆಯ ಮಾಲೆಗ್ಹಾಂವ್‌ ಪಟ್ಟಣದ ಭಿಕು ವೃತ್ತದಲ್ಲಿ ಬಾಂಬ್‌ ಸ್ಫೋಟವೊಂದು ಸಂಭವಿಸಿತ್ತು. ಮುಸ್ಲಿಂಮರೇ ಹೆಚ್ಚಾಗಿ ನೆಲೆಸಿರುವ ಈ ಪ್ರದೇಶದಲ್ಲಿ ಅಂದು ನಡೆದ ಸ್ಫೋಟದಲ್ಲಿ ಆರು ಜನ ಮೃತಪಟ್ಟು, 101 ಮಂದಿ ಗಾಯಗೊಂಡಿದ್ದರು.

‘ವೈಭವ್‌ ರಾವತ್‌ ಒಬ್ಬ ಧೈರ್ಯವಂತ ಗೋರಕ್ಷಕ. ಹಿಂದೂ ಗೋವಂಶ ರಕ್ಷಾ ಸಮಿತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಗೋವುಗಳ ರಕ್ಷಣೆಗಾಗಿ ದುಡಿಯುತ್ತಿದ್ದ’ ಎಂದಿರುವ ಎಚ್‌ಜೆಎಸ್‌ನ ರಾಜ್ಯ ಸಂಘಟಕ ಸುನೀಲ್‌ ಘನಾವತ್‌, ‘ನಮ್ಮ ಸಂಘಟನೆಯು ಈ ಹಿಂದೆ ಆಯೋಜಿಸಿದ್ದ ಕಾರ್ಯಕ್ರಮಗಳು ಮತ್ತು ಹೋರಾಟಗಳಲ್ಲಿ ಭಾಗವಹಿಸಿ ಹಿಂದೂಗಳನ್ನು ಸಂಘಟಿಸುವಲ್ಲಿ ಶ್ರಮಿಸಿದ್ದ’ ಎಂದು ಹೇಳಿಕೊಂಡಿದ್ದಾರೆ.

‘ಆದರೆ, ನಮ್ಮ ಸಂಘಟನೆಯು ಇತ್ತೀಚಿನ ತಿಂಗಳುಗಳಲ್ಲಿ ನಡೆಸಿದ ಕಾರ್ಯಕ್ರಮಗಳಲ್ಲಿ ರಾವತ್‌ ಭಾಗವಹಿಸಿರಲಿಲ್ಲ’ ಎಂದು ಘನಾವತ್‌ ತಿಳಿಸಿದ್ದಾರೆ.

‘ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ, ಬಂಧಿಸಿ, ಕಿರುಕುಳ ನೀಡುತ್ತಿರುವುದೇನೂ ಹೊಸತಲ್ಲ. ಈ ಹಿಂದೆಯೂ ಮಾಲೆಗ್ಹಾಂವ್‌ ಸ್ಫೋಟದ ಆರೋಪದಲ್ಲಿ ಸನಾತನ ಸಂಸ್ಥಾದ ಅಮಾಯಕರನ್ನು ಬಂಧಿಸಲಾಗಿತ್ತು’ ಎಂದು ಹರಿಹಾಯ್ದಿರುವ ಘನಾವತ್‌, ಈ ಬಂಧನವನ್ನು ‘ಮಾಲೆಗ್ಹಾಂವ್‌ ಭಾಗ–2’ ಎಂದು ಹೆಸರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.