ADVERTISEMENT

ವಿಜಯ್ ಮಲ್ಯ ಗಡಿಪಾರಿಗೆ ಉನ್ನತ ಮಟ್ಟದಲ್ಲಿ ಯತ್ನ: ಸುಪ್ರೀಂಗೆ ಕೇಂದ್ರ ಮಾಹಿತಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 10:21 IST
Last Updated 18 ಜನವರಿ 2021, 10:21 IST
ವಿಜಯ್ ಮಲ್ಯ
ವಿಜಯ್ ಮಲ್ಯ   

ನವದೆಹಲಿ: ಸಾವಿರಾರು ಕೋಟಿ ರೂಪಾಯಿ ಸಾಲ ಮರು ಪಾವತಿ ಮಾಡದೆ ಬ್ರಿಟನ್‌ನಲ್ಲಿ ನೆಲೆಸಿರುವ ಉದ್ಯಮಿ ವಿಜಯ್ ಮಲ್ಯ ಅವರ ಗಡಿಪಾರಿಗೆ ಸಂಬಂಧಿಸಿ ಬ್ರಿಟನ್‌ನ ಉನ್ನತ ಮಟ್ಟದ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ತಿಳಿಸಿದೆ.

‘ನಾವು ಉತ್ತಮವಾಗಿಯೇ ಪ್ರಯತ್ನ ಮಾಡುತ್ತಿದ್ದೇವೆ. ಆದಾಗ್ಯೂ, ಪ್ರಕ್ರಿಯೆ ಸ್ಥಗಿತಗೊಂಡಿದೆ. ರಾಜಕೀಯದಿಂದ ಆಡಳಿತಾತ್ಮಕ ಹಂತದ ವರೆಗೆ ಮಲ್ಯ ಗಡಿಪಾರಿಗೆ ಸಂಬಂಧಿಸಿದ ವಿಷಯವನ್ನು ಉನ್ನತ ಮಟ್ಟದಲ್ಲಿ ಪದೇಪದೇ ಪ್ರಸ್ತಾಪಿಸಲಾಗುತ್ತಿದೆ’ ಎಂದು ನ್ಯಾಯಮೂರ್ತಿ ಯು.ಯು. ಲಲಿತ್ ಮತ್ತು ಅಶೋಕ್ ಭೂಷಣ್ ಅವರಿದ್ದ ಪೀಠಕ್ಕೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದ್ದಾರೆ.

2021ರ ಜನವರಿಯಲ್ಲಿ ಬ್ರಿಟನ್‌ನ ಗೃಹ ಸಚಿವರ ಜತೆಯೂ ವಿಚಾರ ಪ್ರಸ್ತಾಪಿಸಲಾಗಿದೆ. ಈ ಪ್ರಕರಣ ಭಾರತಕ್ಕೆ ಎಷ್ಟು ಮಹತ್ವದ್ದು ಎಂಬುದು ತಿಳಿದಿರುವುದಾಗಿ ಬ್ರಿಟನ್‌ ಸರ್ಕಾರವು ವಿದೇಶಾಂಗ ಸಚಿವಾಲಯಕ್ಕೆ ಸಂದೇಶವನ್ನೂ ಕಳುಹಿಸಿದೆ. ಆದರೂ, ಬ್ರಿಟನ್‌ನಲ್ಲಿರುವ ಕಾನೂನು ಸಂಕೀರ್ಣತೆಯಿಂದಾಗಿ ಹಸ್ತಾಂತರ ಇಲ್ಲಿವರೆಗೆ ತಡೆಯಾಗಿದೆ ಎಂದು ಮೆಹ್ತಾ ತಿಳಿಸಿದ್ದಾರೆ.

ಮಲ್ಯ ಗಡಿಪಾರು ಪ್ರಕ್ರಿಯೆಗೆ ಸಂಬಂಧಿಸಿದ ವರದಿ ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ 2020 ನವೆಂಬರ್‌ 2ರಂದು ಸುಪ್ರೀಂ ಕೋರ್ಟ್‌ ಆರು ವಾರಗಳ ಕಾಲಾವಕಾಶ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.