ಅಹಮದಾಬಾದ್: ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದ 104 ಮಂದಿ ಭಾರತೀಯರನ್ನು ಬುಧವಾರ ಮಿಲಿಟರಿ ವಿಮಾನದ ಮೂಲಕ ಭಾರತಕ್ಕೆ ಗಡೀಪಾರು ಮಾಡಲಾಗಿದೆ. ಕೈಗೆ ಬೇಡಿ, ಕಾಲುಗಳಿಗೆ ಕಬ್ಬಿಣದ ಸಂಕೋಲೆ ಹಾಕಿ ಕಳುಹಿಸಲಾಗಿದೆ. ಈ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದ್ದರೆ, ಗಡೀಪಾರಾಗಿ ಮನೆಗೆ ಹಿಂದಿರುಗಿದವರ ಪೋಷಕರು ಮಾತ್ರ ಅಂತೂ ನಮ್ಮ ಮಕ್ಕಳು ಸುರಕ್ಷಿತವಾಗಿ ಬಂದರಲ್ಲ ಎಂದು ನಿಟ್ಟುಸಿರುಬಿಟ್ಟಿದ್ದಾರೆ.
ಗುಜರಾತ್‌ನ ವಡೋದರ ಜಿಲ್ಲೆಯ ಜಯಂತಿಭಾಯ್ ಪಟೇಲ್ ಎಂಬ ವ್ಯಕ್ತಿ ತಮ್ಮ ಮಗಳು ಖುಷ್ಬೂ ಪಟೇಲ್ ಸುರಕ್ಷಿತವಾಗಿ ಹಿಂದಿರುಗಿರುವುದಕ್ಕೆ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.
ನಿನ್ನೆ ಅಮೃತಸರಕ್ಕೆ ಅಮೆರಿಕದ ಮಿಲಿಟರಿ ವಿಮಾನದಲ್ಲಿ ಆಗಮಿಸಿದ 104 ಭಾರತೀಯರ ಪೈಕಿ ಖುಷ್ಬೂ ಪಟೇಲ್ ಸಹ ಒಬ್ಬರು.
ಅಲ್ಲಿಂದ ಇನ್ನಿತರ 32 ಮಂದಿ ಗುಜರಾತಿಗಳ ಜೊತೆ ಅಹಮದಾಬಾದ್‌ಗೆ ಖುಷ್ಬೂ ಬಂದಿಳಿದರು. ಬಳಿಕ, ಅವರನ್ನು ಪೊಲೀಸ್ ವಾಹನಗಳ ಮೂಲಕ ಅವರ ನಿವಾಸಗಳಿಗೆ ಕಳುಹಿಸಲಾಗಿದೆ.
ಖುಷ್ಬೂ ಅವರನ್ನು ಮೊದಲಿಗೆ ಪದ್ರಾ ಪೊಲೀಸ್ ಠಾಣೆಗೆ ಕರೆದೊಯ್ದು, ಪ್ರಾಥಮಿಕ ವಿಚಾರಣೆ ಬಳಿಕ ಲುನಾ ಹಳ್ಳಿಗೆ ಕರೆದೊಯ್ದಿದ್ದಾರೆ.
ಮನೆಗೆ ಹಿಂದಿರುಗಿದ ಖುಷ್ಬೂ ಮಾಧ್ಯಮಗಳಿಗೆ ಪ್ರತಿಕ್ರಿಯಿಸಲಿಲ್ಲ.‘ಪ್ರಯಾಣದುದ್ದಕ್ಕೂ ಅವಳಿಗೆ ಬೇಡಿ ಹಾಕಲಾಗಿತ್ತು. ಪ್ರವಾಸಿ ವೀಸಾ ಅಡಿ ಅವಳು ಅಮೆರಿಕಕ್ಕೆ ತೆರಳಿದ್ದಳು’ಎಂದು ಸಹೋದರ ವರುಣ್ ಹೇಳಿದ್ದಾರೆ.
'ಕೆಲವು ದಾಖಲೆಗಳು ಇಲ್ಲದ ಕಾರಣ ಆಕೆಯನ್ನು ಗಡೀಪಾರು ಮಾಡಲಾಗಿದೆ. ಅಮೆರಿಕ ತಲುಪಲು ಯಾವ ಮಾರ್ಗವನ್ನು ತೆಗೆದುಕೊಂಡಿದ್ದಳು ಎಂಬುದು ನಮಗೆ ತಿಳಿದಿಲ್ಲ. 36 ಗಂಟೆಗಳ ಪ್ರಯಾಣದ ಕಾರಣ ಅವಳು ಈಗ ಮಾತನಾಡುವ ಸ್ಥಿತಿಯಲ್ಲಿಲ್ಲ’ಎಂದು ವರುಣ್ ಹೇಳಿದ್ದಾರೆ.
ಮನೆಗೆ ಮರಳಿದ ಮಗಳನ್ನು ನೋಡಿ ಆಕೆಯ ತಂದೆ ಜಯಂತಿಭಾಯ್ ಪಟೇಲ್ ಅವರಿಗೆ ದುಃಖ ಉಮ್ಮಳಿಸಿ ಬಂದಿತ್ತು. ಆದರೆ, ಆಕೆ ಅಮೆರಿಕಕ್ಕೆ ಹೇಗೆ ಹೋದಳು? ಅಲ್ಲಿ ಏನಾಯಿತು ಎಂಬುದರ ಮಾಹಿತಿ ಇಲ್ಲ ಎಂದು ಅವರು ಹೇಳಿದ್ದಾರೆ. ನಾನು ಬಹಳ ಒತ್ತಡದಲ್ಲಿದ್ದೆ. ಈಗ ಅವಳು ಸುರಕ್ಷಿತವಾಗಿ ಹಿಂದಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ನಮ್ಮ ಸರ್ಕಾರವು ನಮಗೆ ಎಲ್ಲ ರೀತಿಯಲ್ಲೂ ಸಹಾಯ ಮಾಡಿದೆ ಎಂದಿದ್ದಾರೆ.
ಮೆಹ್ಸಾನಾ, ಗಾಂಧಿನಗರ, ಪಟಾನ್, ವಡೋದರ ಮತ್ತು ಖೇಡಾ ಜಿಲ್ಲೆಗಳಿಗೆ ಸೇರಿದ ಇನ್ನಿತರರು ಪ್ರತಿಕ್ರಿಯೆಗೆ ನಿರಾಕರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.