ADVERTISEMENT

ಬಿಜೆಪಿ ಪರ ಧೋರಣೆ ಆರೋಪ: ನಿಷ್ಪಕ್ಷಪಾತ ನಿಲುವು ಸ್ಪಷ್ಟಪಡಿಸಿದ ಫೇಸ್‌ಬುಕ್‌

ಪಿಟಿಐ
Published 21 ಆಗಸ್ಟ್ 2020, 16:49 IST
Last Updated 21 ಆಗಸ್ಟ್ 2020, 16:49 IST
 ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌ (ಚಿತ್ರ: facebook.com/ankhid)
ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌ (ಚಿತ್ರ: facebook.com/ankhid)   

ದೆಹಲಿ: ತನ್ನದು ಪಕ್ಷಾತೀತ ವೇದಿಕೆ ಎಂದು ಸ್ಪಷ್ಟಪಡಿಸಿರುವ ಫೇಸ್‌ಬುಕ್‌, ಭಾರತದಲ್ಲಿ ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳು ತನ್ನ ಮಾನದಂಡಳಿಗೆ ವಿರುದ್ಧವಾಗಿರುವುದನ್ನು ಪೋಸ್ಟ್‌ ಮಾಡಿದರೆ ಅದನ್ನು ಕಿತ್ತೆಸೆಯುವ ಪ್ರಕ್ರಿಯೆಯನ್ನು ಮುಂದುವರಿಸಿಕೊಂಡು ಹೋಗುವುದಾಗಿ ಶುಕ್ರವಾರ ಸ್ಪಷ್ಟಪಡಿಸಿದೆ.

‘ಬಿಜೆಪಿಯ ಒಬ್ಬ ಮುಖಂಡ ಮತ್ತು ಇತರ ಮೂವರ ದ್ವೇಷ ಭಾಷಣದ ಬಗ್ಗೆ ‘ಫೇಸ್‌ಬುಕ್‌ ಇಂಡಿಯಾ’ ಮೌನ ವಹಿಸಿದೆ. ತನ್ನ ವ್ಯಾಪಾರಕ್ಕೆ ಯಾವುದೇ ಹಾನಿ ಆಗದಿರಲಿ ಎಂಬುದೇ ಇದಕ್ಕೆ ಕಾರಣ. ಬಿಜೆಪಿ ನಾಯಕರ ದ್ವೇಷ ಭಾಷಣಗಳ ವಿರುದ್ಧ ಯಾವುದೇ ಕ್ರಮಗಳನ್ನು ಅನ್ವಯಿಸದಂತೆ ಫೇಸ್‌ಬುಕ್‌ ಭಾರತದ ಸಾರ್ವಜನಿಕ ಅಧಿಕಾರಿ ಅಂಕಿದಾಸ್‌ ಅವರು ಸಿಬ್ಬಂದಿಗೆ ಸೂಚಿಸಿದ್ದರು,’ ಎಂದು ಅಮೆರಿಕದ ‘ವಾಲ್‌ಸ್ಟ್ರೀಟ್‌ ಜರ್ನಲ್‌’ ಇತ್ತೀಚೆಗೆ ವರದಿ ಪ್ರಕಟಿಸಿತ್ತು.

ಈ ಬೆಳವಣಿಗೆಯು ದೇಶದಲ್ಲಿ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಇದೇ ಹಿನ್ನೆಲೆಯಲ್ಲಿ ಫೇಸ್‌ಬುಕ್‌ ಭಾರತ ಶುಕ್ರವಾರ ಸ್ಪಷ್ಟನೆ ನೀಡಿದೆ.

ADVERTISEMENT

‘ಫೇಸ್‌ಬುಕ್ ಯಾವಾಗಲೂ ಮುಕ್ತ, ಪಾರದರ್ಶಕ ಮತ್ತು ಪಕ್ಷಾತೀತ ವೇದಿಕೆಯಾಗಿದೆ. ಜನರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಈ ವೇದಿಕೆಯಲ್ಲಿ ವ್ಯಕ್ತಪಡಿಸಬಹುದು. ನಾವು ನಮ್ಮ ನೀತಿಗಳನ್ನು ಜಾರಿಗೊಳಿಸುವ ವಿಚಾರದಲ್ಲಿ ಕಳೆದ ಕೆಲವು ದಿನಗಳಿಂದ ಪಕ್ಷಪಾತದ ಆರೋಪ ಎದುರಿಸುತ್ತಿದ್ದೇವೆ. ಅದನ್ನು ತೀರಾ ಗಂಭೀರವಾಗಿ ಪರಿಗಣಿಸಿದ್ದೇವೆ. ಯಾವುದೇ ರೂಪದ ದ್ವೇಷ ಮತ್ತು ಧರ್ಮಾಂಧತೆಯನ್ನು ಸಂಸ್ಥೆ ಖಂಡಿಸುತ್ತದೆ’ ಎಂದು ಫೇಸ್‌ಬುಕ್ ಇಂಡಿಯಾ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಿತ್ ಮೋಹನ್ ಬ್ಲಾಗ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

‘ನಿಷ್ಪಕ್ಷಪಾತ ವಿಧಾನದ ಮೂಲಕ ಫೇಸ್‌ಬುಕ್‌ ಯಾವುದೇ ವಿಷಯದೊಂದಿಗೆ ವ್ಯವಹರಿಸುತ್ತದೆ. ಸಮುದಾಯ ಮಾನದಂಡಗಳ ಬಲದೊಂದಿಗೆ ಫೇಸ್‌ಬುಕ್‌ ಆಡಳಿತ ನಡೆಸುತ್ತದೆ,’ ಎಂದು ಅವರು ಹೇಳಿದರು.

‘ಯಾರ ರಾಜಕೀಯ ಸ್ಥಾನಮಾನ, ಪಕ್ಷದ ಸಂಬಂಧ ಅಥವಾ ಧಾರ್ಮಿಕ ಮತ್ತು ಸಾಂಸ್ಕೃತಿಕ ನಂಬಿಕೆಯನ್ನು ಪರಿಗಣಿಸದೆ ಫೇಸ್‌ಬುಕ್‌ ತನ್ನ ನೀತಿಗಳನ್ನು ಜಾಗತಿಕವಾಗಿ ಜಾರಿಗೊಳಿಸುತ್ತದೆ. ಸಂಸ್ಥೆಯ ಸಮುದಾಯ ಮಾನದಂಡಗಳನ್ನು ಉಲ್ಲಂಘಿಸಿದಾಗ ಅಂಥ ಪೋಸ್ಟ್‌ಗಳನ್ನು ತೆಗೆದುಹಾಕಿದ್ದೇವೆ. ಭಾರತದಲ್ಲಿ ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳು ಅಂಥ ಪೋಸ್ಟ್ ಮಾಡಿದರೆ ಅವುಗಳನ್ನು ತೆಗೆದುಹಾಕುವುದನ್ನು ಮುಂದುವರಿಸುತ್ತಾ ಸಾಗುತ್ತೇವೆ’ ಎಂದು ಅಜಿತ್‌ ಮೋಹನ್‌ ಅವರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.