ADVERTISEMENT

ಭಾರತ, ಮೋದಿ ವಿರೋಧಿಯ 2600 ಖಾತೆಗಳನ್ನು ತೆಗೆದು ಹಾಕಿದ ಟ್ವಿಟರ್‌

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2019, 3:22 IST
Last Updated 12 ಏಪ್ರಿಲ್ 2019, 3:22 IST
   

ನವದೆಹಲಿ:ಪಾಕಿಸ್ತಾನಿ ಮಿಲಿಟರಿ ಸಾರ್ವಜನಿಕ ಸಂಪರ್ಕ ವಿಭಾಗದ ಉದ್ಯೋಗಿಗಳಿಗೆ ಸೇರಿದ್ದ 100ಕ್ಕೂ ಹೆಚ್ಚು ಖಾತೆಗಳನ್ನು ಫೇಸ್‌ಬುಕ್‌ ತೆಗೆದುಹಾಕಿದ ಬೆನ್ನಲ್ಲೇ, ಭಾರತ ಮತ್ತು ಮೋದಿ ವಿರೋಧಿ ಪೊಸ್ಟ್‌ಗಳನ್ನು ಹಾಕುತ್ತಿದ್ದ2600ಕ್ಕೂ ಹೆಚ್ಚು ಇರಾನಿ ಮೂಲದ ಖಾತೆಗಳನ್ನು ಟ್ವಿಟರ್ ತೆಗೆದು ಹಾಕಿದೆ.

ಸಾಮಾಜಿಕ ಜಾಲತಾಣ ಟ್ವಿಟರ್‌ 2600 ಖಾತೆಗಳನ್ನು ರದ್ದು ಮಾಡಿದೆ. ಇವುಗಳಲ್ಲಿ ಭಾರತ ವಿರೋಧಿ ಮತ್ತು ಮೋದಿ ವಿರೋಧಿ ಪೋಸ್ಟ್‌ಗಳನ್ನುಪ್ರಕಟಿಸಲಾಗುತ್ತಿತ್ತು. ಈ ಖಾತೆಗಳ ಮೂಲ ಇರಾನ್‌ ಎಂದು ಹೇಳಲಾಗಿದೆ. ’ಬಾಯ್‌ಕಾಟ್‌ ಇಂಡಿಯಾ’, ’ಮೋದಿ ಟೆರರಿಸ್ಟ್‌’, ’ಮೋದಿ ಇಸ್‌ ಎ ಡಾಂಕಿ’ ಇಂಡಿಯನ್‌ ಡಾಗ್ಸ್‌ ಗೋಬ್ಯಾಕ್‌’ ಎಂಬ ಪೋಸ್ಟರ್‌ಗಳು ಹಾಗೂ ಭಾರತ ವಿರೋಧಿ ಟ್ವೀಟ್‌ಗಳನ್ನು ತೆಗೆದು ಹಾಕಲಾಗಿದೆ ಎಂದು ಟ್ವಿಟರ್ ಹೇಳಿದೆ.

ಅಸಮರ್ಪಕ ನಡೆಯನ್ನು ಹೊಂದಿರುವ ಖಾತೆಗಳ ಮೇಲೆ 2018 ಆಗಸ್ಟ್‌ನಿಂದಲೂ ನಿಗಾ ವಹಿಸಲಾಗಿತ್ತು.ಅಂತಹ 2617 ಖಾತೆಗಳನ್ನು ಈಗ ತೆಗೆದು ಹಾಕಲಾಗಿದೆ. ಭಾರತದಲ್ಲಿ 17ನೇ ಲೋಕಸಭಾ ಚುನಾವಣೆ ನಡೆಯುತ್ತಿರುವುದರಿಂದ ನಕಲಿ ಸಂದೇಶ ಮತ್ತು ಸುಳ್ಳು ಸುದ್ದಿ ಹರಡಬಾರದು ಎಂಬ ಉದ್ದೇಶದಿಂದಾಗಿ ಇಂತಹ ಖಾತೆಗಳನ್ನು ರದ್ದು ಮಾಡಲಾಗಿದೆ.

ADVERTISEMENT

ಇರಾನ್‌ನಲ್ಲಿ ಭಾರತವನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಳತಾಣಗಳ ಮೂಲಕ ಸುಳ್ಳು ಸುದ್ದಿ ಪಸರಿಸುತ್ತಿರುವುದು ಉಭಯ ದೇಶಗಳ ನಡುವಿನ ವಿದೇಶಾಂಗ ನೀತಿಗೆ ಧಕ್ಕೆಯಾಗುವ ಸಾಧ್ಯತೆಗಳಿವೆ ಎಂದು ತಲೀಮ್‌ ಜೀ ಆಹಮ್ಮದ್‌ ಹೇಳಿದ್ದಾರೆ. ಇವರು ಸೌದಿ ಅರೇಬಿಯಾ, ಓಮನ್‌ ಮತ್ತು ಯುಎಇ ದೇಶಗಳಲ್ಲಿ ಭಾರತೀಯ ರಾಯಭಾರಿಯಾಗಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ.

ಟ್ವಿಟರ್‌ ತೆಗೆದು ಹಾಕಿರುವ ಖಾತೆಗಳಲ್ಲಿ ಬಹುತೇಕ ಕಾಶ್ಮೀರ ಪಾಕಿಸ್ತಾನದ ಭಾಗ ಎಂದು ಬಿಂಬಿಸುವಂತಹ ಪೋಸ್ಟ್‌ಗಳು ಇದ್ದವು. ಗೃಹ ಸಚಿವ ರಾಜನಾಥ್‌ ಸಿಂಗ್‌, ಡೊನಾಲ್ಡ್‌ ಟ್ರಂಪ್‌ ಅವರನ್ನು ಅವಹೇಳನ ಮಾಡುವ ಪೋಸ್ಟ್‌ಗಳನ್ನು ಆ ಖಾತೆಗಳಲ್ಲಿ ಪ್ರಕಟಿಸಲಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.