ADVERTISEMENT

ಅತ್ಯಾಚಾರ ಆರೋಪಿ ಧನಂಜಯ್‌ ಅವರನ್ನು ಸಚಿವರಾಗಿ ಮುಂದುವರಿಸಲು ಎನ್‌ಸಿಪಿ ನಿರ್ಧಾರ

ಪಿಟಿಐ
Published 15 ಜನವರಿ 2021, 5:30 IST
Last Updated 15 ಜನವರಿ 2021, 5:30 IST
ಧನಂಜಯ್ ಮುಂಡೆ
ಧನಂಜಯ್ ಮುಂಡೆ   

ಮುಂಬೈ: ಅತ್ಯಾಚಾರ ಆರೋಪ ಎದುರಿಸುತ್ತಿರುವ ಮಹಾರಾಷ್ಟ್ರದ ಸಾಮಾಜಿಕ ನ್ಯಾಯ ಖಾತೆ ಸಚಿವ ಧನಂಜಯ್‌ ಮುಂಡೆ ಅವರನ್ನು, ಸಚಿವ ಸ್ಥಾನದಲ್ಲಿ ಮುಂದುವರಿಸಲು ಎನ್‌ಸಿಪಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಸಚಿವರ ವಿರುದ್ಧ ಅತ್ಯಾಚಾರದ ಆರೋಪ ಹೊರಿಸಿರುವ ಮಹಿಳೆ, ತಮ್ಮ ಪಕ್ಷದ ಕೆಲವರನ್ನು ಇದೇ ರೀತಿ ಸುಳ್ಳು ಆರೋಪ ಹೊರಿಸಿ, ಕಿರುಕುಳ ನೀಡಿದ್ದಾರೆಂದು ಬಿಜೆಪಿ ಮತ್ತು ಎಂಎನ್‌ಎಸ್‌ನ ಕೆಲವು ಮುಖಂಡರು ಆರೋಪಿಸಿದ ಹಿನ್ನೆಲೆಯಲ್ಲಿ ಎನ್‌ಸಿಪಿ ಈ ನಿರ್ಧಾರ ತೆಗೆದುಕೊಂಡಿದೆ.

ಗುರುವಾರ ತಡರಾತ್ರಿ ಎನ್‌ಸಿಪಿ ಮುಖಂಡ ಪ್ರಫುಲ್ ಪಟೇಲ್ ಅವರ ಮನೆಯಲ್ಲಿ, ಪಕ್ಷದ ಅಧ್ಯಕ್ಷ ಶರದ್‌ ಪವಾರ್ ಉಪ ಮುಖ್ಯಮಂತ್ರಿ ಅಜಿತ್ ಪವಾರ್, ಜಲ ಸಂಪನ್ಮೂಲ ಸಚಿವ ಜಯಂತ್ ಪಾಟೀಲ್ ಮತ್ತು ಹಿರಿಯ ಮುಖಂಡ ಪ್ರಫುಲ್ ಪಟೇಲ್ ಅವರು ಸಭೆ ನಡೆಸಿ, ಪ್ರಕರಣದ ಬಗ್ಗೆ ಚರ್ಚಿಸಿ, ಸಚಿವರನ್ನು ಮುಂದುವರಿಸುವ ನಿರ್ಧಾರ ಕೈಗೊಂಡಿದ್ದಾರೆ.

ADVERTISEMENT

ಸಾಮಾಜಿಕ ನ್ಯಾಯ ಖಾತೆ ಸಚಿವ ಧನಂಜಯ್‌ ಮುಂಡೆ ಅವರ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರದ ಆರೋಪ ಮಾಡಿದ್ದರು. ಈ ಸಂಬಂಧ ಪೊಲೀಸರು ತಾವು ನೀಡಿದ ದೂರನ್ನು ನಿರ್ಲಕ್ಷಿಸಿದ್ದಾರೆ ಎಂದೂ ಆರೋಪಿಸಿದ್ದರು.

ಮಹಿಳೆಯ ಆರೋಪವನ್ನು ತಳ್ಳಿ ಹಾಕಿದ್ದ ಸಚಿವರು, ‘ಅವರು ನನ್ನನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ‘ ಎಂದು ದೂರಿದ್ದರು.

ಬಿಜೆಪಿ ಮುಖಂಡ ಕೃಷ್ಣ ಹೆಗಡೆ ಅವರು ಗುರುವಾರ ಮುಂಬೈ ಮೂಲದ ಮಹಿಳೆಯೊಬ್ಬರು ಕೆಲವು ವರ್ಷಗಳಿಂದ ನನಗೆ ಇದೇ ರೀತಿ ಕಿರುಕುಳ ನೀಡುತ್ತಿದ್ದರು ಎಂದು ಹೇಳಿದ್ದರು. ಎಂಎನ್‌ಎಸ್‌ ಪಕ್ಷದ ಮುಖಂಡರೊಬ್ಬರು ಮಹಿಳೆ ವಿರುದ್ಧ ಇದೇ ರೀತಿ ಆರೋಪ ಮಾಡಿದ್ದರು. ವಿರೋಧ ಪಕ್ಷಗಳ ನಾಯಕರು ಮಾಡಿದ ಈ ಆರೋಪಗಳು, ಸಚಿವ ಧನಂಜಯ ಮುಂಡೆ ಅವರ ವಾದಕ್ಕೆ ಬಲ ನೀಡಿದ್ದು, ಸಚಿವ ಸ್ಥಾನದಲ್ಲಿ ಮುಂದುವರಿಯಲು ನೆರವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.