ADVERTISEMENT

ಜನರು ಪ್ರವಾಹದಿಂದ ತತ್ತರಿಸುತ್ತಿದ್ದರೆ, ಸರ್ಕಾರ ಪ್ರಚಾರದಲ್ಲಿ ತೊಡಗಿದೆ: ಅಖಿಲೇಶ್

ಪಿಟಿಐ
Published 4 ಆಗಸ್ಟ್ 2025, 9:27 IST
Last Updated 4 ಆಗಸ್ಟ್ 2025, 9:27 IST
ಅಖಿಲೇಶ್ ಯಾದವ್
ಅಖಿಲೇಶ್ ಯಾದವ್   

ಲಖನೌ: ಉತ್ತರ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಹದಗೆಡುತ್ತಿರುವುದಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 'ಭ್ರಷ್ಟ ಮತ್ತು ವಿಫಲ' ಆಡಳಿತವು, ಜನಕಲ್ಯಾಣಕ್ಕಿಂತಲೂ ಪ್ರಚಾರ ಕಾರ್ಯಗಳಲ್ಲಿ ತೊಡಗಿಕೊಂಡಿದೆ ಎಂದು ಟೀಕಿಸಿದ್ದಾರೆ.

ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌/ಟ್ವಿಟರ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅಖಿಲೇಶ್‌, 'ಸೂಪರ್‌ ವಿವಿಐಪಿ' ಸಮಾವೇಶಗಳನ್ನು ಆಯೋಜಿಸಬಲ್ಲ ರಾಜ್ಯ ಸರ್ಕಾರವು, ಪ್ರವಾಹಪೀಡಿತ ಪ್ರದೇಶಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಲು ವಿಫಲವಾಗುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ 37 ತಾಲ್ಲೂಕುಗಳ 402 ಗ್ರಾಮಗಳು ಪ್ರವಾಹದಿಂದ ತತ್ತರಿಸಿವೆ. ಸುಮಾರು, 84,392 ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಭಾನುವಾರ ವರದಿಯಾಗಿದೆ.

ADVERTISEMENT

ಕಾನ್ಪುರ ನಗರ, ಲಕ್ಷ್ಮಿಪುರ್‌ ಖೇರಿ, ಆಗ್ರಾ, ಔರಾಯ, ಚಿತ್ರಕೂಟ್‌, ಬಲ್ಲಿಯಾ, ಬಂದಾ, ಘಾಜಿಪುರ್‌, ಮಿರ್ಜಾಪುರ್‌, ಪ್ರಯಾಗರಾಜ್‌, ವಾರಾಣಸಿ, ಚಂದೌಲಿ, ಜಲೌನ್‌, ಕಾನ್ಪುರ ಗ್ರಾಮಾಂತರ, ಹಮೀರಪುರ, ಎತವಾ ಹಾಗೂ ಫತ್ಹೇಪುರ್‌ ಜಿಲ್ಲೆಗಳನ್ನು ಪ್ರವಾಹ ಬಾಧಿಸಿದೆ.

'ಪ್ರಯಾಗರಾಜ್‌ನಲ್ಲಿ ಮಾತ್ರವಲ್ಲ, ರಾಜ್ಯದಾದ್ಯಂತ ಭೀಕರ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಜನರು ಆಹಾರ ಮತ್ತು ಕುಡಿಯುವ ನೀರಿನ ಕೊರತೆಯಿಂದ ಬಳಲುತ್ತಿದ್ದಾರೆ. ಪರಿಸ್ಥಿತಿ ಅಸ್ತವ್ಯಸ್ತವಾಗಿದೆ. ಜನರು ಅಮಾನವೀಯ ಪರಿಸ್ಥಿತಿಯಲ್ಲಿಯೇ ಬದುಕುವಂತಾಗಿದೆ' ಎಂದು ಅಖಿಲೇಶ್‌ ಕಳವಳ ವ್ಯಕ್ತಪಡಿಸಿದ್ದಾರೆ.

ವೈದ್ಯಕೀಯ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಇದರಿಂದಾಗಿ, ಮಕ್ಕಳು, ಗರ್ಭಿಣಿಯರು ಹಾಗೂ ವಯಸ್ಸಾದವರು ಆರೋಗ್ಯ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

'ವಿದ್ಯುತ್‌ ಪ್ರವಹಿಸುವ ಆತಂಕ, ವಿಷಜಂತುಗಳ ಭೀತಿ ಜನರನ್ನು ಕಾಡುತ್ತಿದೆ. ಮನೆಗಳು ಕುಸಿಯುತ್ತಿವೆ. ಆಸ್ತಿಪಾಸ್ತಿ ಕೊಚ್ಚಿಹೋಗುತ್ತಿವೆ. ಜನರಿಗೆ ಧರಿಸಲು ಬಟ್ಟೆಗಳೂ ಇಲ್ಲದಂತಾಗಿದೆ' ಎಂದು ಗಂಭೀರ ಸಮಸ್ಯೆಗಳನ್ನು ಉಲ್ಲೇಖಿಸಿದ್ದಾರೆ.

'ಭ್ರಷ್ಟ ಹಾಗೂ ವಿಫಲ ಸರ್ಕಾರವು ಸ್ವಯಂ ಪ್ರಚಾರದಲ್ಲಿ ಬ್ಯುಸಿ ಆಗಿದ್ದರೆ, ಸ್ಥಳೀಯ ಆಡಳಿತವು ನಾಪತ್ತೆಯಾಗಿದೆ' ಎಂದು ಆರೋಪಿಸಿದ್ದಾರೆ.

'ಜನರ ಗುರುತಿನ ಚೀಟಿಗಳು, ಪಡಿತರ ಚೀಟಿ, ಭೂ ಹಕ್ಕುಪತ್ರಗಳು, ಬ್ಯಾಂಕ್‌ ದಾಖಲೆಗಳು, ವೈದ್ಯಕೀಯ ಚೀಟಿಗಳು ಹಾಗೂ ಶೈಕ್ಷಣಿಕ ಪ್ರಮಾಣಪತ್ರಗಳು ಕೊಚ್ಚಿಹೋಗಿವೆ. ವಾಹನಗಳು ಮುಳುಗಿವೆ. ಜೀವನೋಪಾಯ ಅಸ್ತವ್ಯಸ್ತವಾಗಿದೆ' ಎಂದು ಗುಡುಗಿದ್ದಾರೆ.

ಗಂಗಾ ನದಿಯು ವಾರಾಣಸಿಯಲ್ಲಿ ಸೋಮವಾರ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ‌ಕೇಂದ್ರ ಜಲ ಆಯೋಗದ ಮಾಹಿತಿ ಪ್ರಕಾರ, ಗಂಗಾ ನದಿಯ ಅಪಾಯದ ಮಟ್ಟ 71.26 ಮೀ. ಆಗಿದ್ದು, ಸೋಮವಾರ ಬೆಳಿಗ್ಗೆ ಹೊತ್ತಿಗೆ 72.1 ಮೀ.ಗೆ ತಲುಪಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.