ADVERTISEMENT

ಪುಣೆಯಲ್ಲಿ ಪತ್ತೆಯಾಯ್ತು ನಕಲಿ ಕಾಲ್ ಸೆಂಟರ್; USನವರಿಂದ ನಿತ್ಯ ₹25 ಲಕ್ಷ ಸುಲಿಗೆ

ಪಿಟಿಐ
Published 24 ಮೇ 2025, 13:15 IST
Last Updated 24 ಮೇ 2025, 13:15 IST
<div class="paragraphs"><p>ಸೈಬರ್ ಅಪರಾಧ</p></div>

ಸೈಬರ್ ಅಪರಾಧ

   

ಪುಣೆ: ಅಮೆರಿಕದ ನಾಗರಿಕರಿಗೆ ಬಂಧನದ ಬೆದರಿಕೆಯೊಡ್ಡಿ ನಿತ್ಯ ₹25 ಲಕ್ಷ ಸುಲಿಗೆ ಮಾಡುತ್ತಿದ್ದ ನಕಲಿ ಕಾಲ್‌ ಸೆಂಟರ್ ಮೇಲೆ ದಾಳಿ ನಡೆಸಿರುವ ಪೊಲೀಸರು ಐವರನ್ನು ಶನಿವಾರ ವಶಕ್ಕೆ ಪಡೆದಿದ್ದಾರೆ.

ಬಂಧಿತರನ್ನು ರಾಜಸ್ಥಾನದ ಸರ್ಜೀತ್‌ಸಿಂಗ್ ಗಿರಾವತ್‌ ಸಿಂಗ್‌ ಶೇಖಾವತ್‌, ಗುಜರಾತ್‌ನ ಅಭಿಷೇಕ್‌ ಅಜಯ್‌ಕುಮಾರ್ ಪಾಂಡೆ, ಶ್ರೀಮಯ ಪರೇಶ್ ಶಾ, ಲಕ್ಷ್ಮಣ್‌ ಅಮರ್ಸಿಂಗ್ ಶೇಖಾವತ್‌ ಮತ್ತು ಆರೊನ್‌ ಅರುಮಾನ್‌ ಎಂದು ಗುರುತಿಸಲಾಗಿದೆ. ಇತರ ಮೂವರು ಶಂಕಿತರು ಪರಾರಿಯಾಗಿದ್ದಾರೆ. ಇವರ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಮ್ಯಾಗ್ನೆಟಲ್‌ ಬಿಪಿಎಲ್‌ ಅಂಡ್‌ ಕನ್ಸಲ್ಟೆಂಟ್‌ ಎಲ್‌ಎಲ್‌ಪಿ ಎಂಬ ಹೆಸರಿನ ಕಂಪನಿ ತೆರೆದಿದ್ದ ಇವರು, ಖರಾಡಿಯಲ್ಲಿರುವ ಬಹುಮಹಡಿ ಕಟ್ಟಡದಲ್ಲಿ 2024ರ ಆಗಸ್ಟ್‌ನಿಂದ ಕಚೇರಿ ಹೊಂದಿದ್ದರು. ಈ ನಕಲಿ ಕಾಲ್‌ಸೆಂಟರ್‌ನಲ್ಲಿ ಮಹಿಳೆಯರನ್ನೂ ಒಳಗೊಂಡು 150 ಏಜೆಂಟರು ಇದ್ದರು. ಇವರು ಅಮೆರಿಕದ ಕಾಲಮಾನಕ್ಕೆ ತಕ್ಕಂತೆ ಕೆಲಸ ಮಾಡುತ್ತಿದ್ದರು. ಇವರನ್ನು ತನಿಖೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

‘ಅಮೆರಿಕದ ನಾಗರಿಕರ ಸಂಪರ್ಕ ಸಂಖ್ಯೆ ಪಡೆದು ಅವರಿಗೆ ಕರೆ ಮಾಡುತ್ತಿದ್ದರು. ಮಾದಕ ದ್ರವ್ಯ ಕಳ್ಳಸಾಗಣೆಯಲ್ಲಿ ಅವರ ಖಾತೆ ದುರುಪಯೋಗವಾಗಿದೆ ಅಥವಾ ಇನ್ಯಾವುದೇ ಅಪರಾಧ ಕೃತ್ಯಗಳಲ್ಲಿ ಬಳಕೆಯಾಗಿದೆ ಎಂದು ಹೇಳಿ ಬೆದರಿಸುತ್ತಿದ್ದರು. ಸಂತ್ರಸ್ತರನ್ನು ಬಂಧಿಸುವ ಬೆದರಿಕೆಯೊಡ್ಡಿ, ಅವರಿಂದ ಹಣ ವಸೂಲು ಮಾಡುತ್ತಿದ್ದರು. ಬಂಧಿತರು ಅದನ್ನು ತಮ್ಮ ವೈಯಕ್ತಿಕ ಲಾಭಕ್ಕೆ ಬಳಸಿಕೊಳ್ಳುತ್ತಿದ್ದರು’ ಎಂದು ಪುಣೆಯ ಜಂಟಿ ಪೊಲೀಸ್ ಆಯುಕ್ತ ರಂಜನ್ ಕುಮಾರ್ ತಿಳಿಸಿದ್ದಾರೆ.

‘ಕಾನೂನು ಜಾರಿ ಅಧಿಕಾರಿಗಳ ಸೋಗಿನಲ್ಲಿ ಅಮೆರಿಕ ನಾಗರಿಕರನ್ನು ‘ಡಿಜಿಟಲ್ ಆರೆಸ್ಟ್‌’ ಹೆಸರಿನಲ್ಲಿ ಬೆದರಿಸುತ್ತಿದ್ದ ಈ ನಕಲಿ ಕಾಲ್‌ಸೆಂಟರ್‌ನ ಸಿಬ್ಬಂದಿ, ದಂಡ ಅಥವಾ ಭದ್ರತಾ ಠೇವಣಿ ಹೆಸರಿನಲ್ಲಿ ನಿತ್ಯ 30 ಸಾವಿರದಿಂದ 40 ಸಾವಿರ ಅಮೆರಿಕನ್ ಡಾಲರ್‌ನಷ್ಟು ಸುಲಿಗೆ ಮಾಡುತ್ತಿದ್ದರು. ಹೀಗೆ ಸುಲಿಗೆಗೆ ಒಳಗಾಗುತ್ತಿದ್ದವರಲ್ಲಿ ಬಹುತೇಕರು ಹಿರಿಯ ನಾಗರಿಕರು ಮತ್ತು ನಿವೃತ್ತರು’ ಎಂದು ವಿವರಿಸಿದ್ದಾರೆ.

ಬಂಧಿತರಿಂದ 64 ಲ್ಯಾಪ್‌ಟಾಪ್‌ ಮತ್ತು 41 ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲ್ಯಾಪ್‌ಟಾಪ್‌ಗಳಲ್ಲಿ ಕೆಲ ಸಂಶಯಾಸ್ಪದ ಅಪ್ಲಿಕೇಷನ್‌ಗಳು ಕಂಡುಬಂದಿವೆ. ವಿಪಿಎನ್ ಮತ್ತು ಅಮೆರಿಕ ನಾಗರಿಕರ ಸಾವಿರಾರು ಸಂಪರ್ಕ ಸಂಖ್ಯೆಗಳು ಪತ್ತೆಯಾಗಿವೆ. ಕರೆ ಮಾಡುವವರ ಗುರುತು ಮರೆಮಾಚುವ ತಂತ್ರಾಂಶವನ್ನು ಇವರು ಬಳಸುತ್ತಿದ್ದರು. 

‘ಇಲ್ಲಿ ಕೆಲಸ ಮಾಡುವ ಏಜೆಂಟರಿಗೆ ಮಾಸಿಕ ₹25 ಸಾವಿರ ವೇತನ ನೀಡಲಾಗುತ್ತಿತ್ತು. ಏಜೆಂಟರ ಹಿನ್ನೆಲೆಯನ್ನು ಪರಿಶೀಲಿಸಲಾಗುತ್ತಿದೆ. ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಅವರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗುವುದು’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.