ADVERTISEMENT

ಲಖನೌ | ನಕಲಿ ರಾಯಭಾರಿ ಕಚೇರಿ: ₹300 ಕೋಟಿಯಷ್ಟು ವಂಚನೆ?

​ಪ್ರಜಾವಾಣಿ ವಾರ್ತೆ
ಪಿಟಿಐ
Published 27 ಜುಲೈ 2025, 18:27 IST
Last Updated 27 ಜುಲೈ 2025, 18:27 IST
.
.   

ಲಖನೌ: ಕಲ್ಪಿತವಾದ ಸಣ್ಣ ರಾಷ್ಟ್ರಗಳ ಹೆಸರಿನಲ್ಲಿ ನಕಲಿ ರಾಯಭಾರಿ ಕಚೇರಿ ನಿರ್ವಹಿಸುತ್ತಿದ್ದ ವ್ಯಕ್ತಿಯನ್ನು ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆಯು (ಎಸ್‌ಟಿಎಫ್‌) ಬಂಧಿಸಿರುವ ಪ್ರಕರಣದ ತನಿಖೆಯು ಕುತೂಹಲಕಾರಿ ಮಾಹಿತಿಯನ್ನು ಅನಾವರಣಗೊಳಿಸುತ್ತಿದೆ. 

ಹರ್ಷವರ್ಧನ್‌ ಜೈನ್‌ ಬಂಧಿತ. ಈತ ಸ್ವಿಟ್ಜರ್ಲೆಂಡ್‌ನಲ್ಲಿ ಎಹ್ಸಾನ್‌ ಅಲಿ ಸಯೀದ್‌ ಜೊತೆ ₹300 ಕೋಟಿ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂಬ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸಿದ್ದಾರೆ.

ಗಾಜಿಯಾಬಾದ್‌ನಲ್ಲಿ ಬಂಧನಕ್ಕೊಳಗಾದ ಜೈನ್‌, ಯಾವೊಂದು ದೇಶವೂ ಮನ್ನಣೆ ನೀಡದ ಅಂಟಾರ್ಕ್ಟಿಕಾದ ಸಣ್ಣ ರಾಷ್ಟ್ರ ವೆಸ್ಟಾರ್ಕ್ಟಿಕಾದ ರಾಯಭಾರಿ ಎಂದು ಹೇಳಿಕೊಂಡಿದ್ದಾನೆ. ಇಲ್ಲಿನ ಕವಿ ನಗರ ಪ್ರದೇಶದಲ್ಲಿರುವ ಅರಮನೆಯಂತಹ ಭವ್ಯ ಬಂಗಲೆಯೊಂದರಲ್ಲಿ ಈ ರಾಯಭಾರಿ ಕಚೇರಿಯನ್ನು ನಿರ್ವಹಿಸುತ್ತಿದ್ದ.

ADVERTISEMENT

ರಾಜಕಾರಣಿಗಳು, ಹಿರಿಯ ಅಧಿಕಾರಿಗಳೊಟ್ಟಿಗೆ ತನಗೆ ಸಂಪರ್ಕವಿದೆ ಎಂದು ಬಿಂಬಿಸಿಕೊಳ್ಳಲು ನಕಲಿ ಫೋಟೊಗಳನ್ನು ಜನರಿಗೆ ತೋರಿಸಿ ವಂಚಿಸುತ್ತಿದ್ದ ಎನ್ನಲಾಗಿದೆ. ಸಾಗರೋತ್ತರ ಉದ್ಯೋಗ ಹಗರಣ, ಹವಾಲಾ ಜಾಲ ಹಾಗೂ ಗೂಢಚಾರ ಚಟುವಟಿಕೆಗಳಲ್ಲಿ ಭಾಗಿಯಾಗಿರಬಹುದು ಎಂಬುದರ ಬಗ್ಗೆಯೂ ಪೊಲೀಸರ ತನಿಖೆ ನಡೆದಿದೆ.

10 ವರ್ಷಗಳಲ್ಲಿ 162 ಬಾರಿ ವಿದೇಶ ಯಾತ್ರೆ ನಡೆಸಿರುವ ಜೈನ್‌, ವಿವಾದಾತ್ಮಕ ಆಧ್ಯಾತ್ಮಿಕ ಗುರು ಚಂದ್ರಸ್ವಾಮಿ ಹಾಗೂ ಅಂತರರಾಷ್ಟ್ರೀಯ ಶಸ್ತ್ರಾಸ್ತ್ರ ವ್ಯಾಪಾರಿ ಅದ್ನಾನ್‌ ಖಶೋಗಿ ಜೊತೆಯೂ ನಿಕಟ ಸಂಪರ್ಕ ಹೊಂದಿದ್ದಾನೆ.

ಚಂದ್ರಸ್ವಾಮಿ ಮತ್ತು ಅಲಿ ಅವರೊಟ್ಟಿಗಿನ ವ್ಯವಹಾರಗಳನ್ನು ಹೊಂದಿದ್ದ ಡೈರಿಯನ್ನು ಹರ್ಷವರ್ಧನ್‌ ಕಚೇರಿಯಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

1980–90ರ ದಶಕದಲ್ಲಿ ರಾಜಕೀಯ ವಲಯದಲ್ಲಿ ಪ್ರಭಾವಿಯಾಗಿದ್ದ ಚಂದ್ರಸ್ವಾಮಿ ಅವರು ಮಾಜಿ ಪ್ರಧಾನಿ ಚಂದ್ರಶೇಖರ್‌, ನರಸಿಂಹರಾವ್ ಹಾಗೂ ವಿ.ಪಿ. ಸಿಂಗ್‌ ಅವರಿಗೂ ಹತ್ತಿರವಾಗಿದ್ದರು. ಹರ್ಷವರ್ಧನ್‌ ಜೈನ್‌ಗೆ ಅಲಿಯನ್ನು ಪರಿಚಯಿಸಿದ್ದರು.

ಹಣದ ಅಕ್ರಮ ವಹಿವಾಟು ನಡೆಸಲಿಕ್ಕಾಗಿಯೇ ಈ ಇಬ್ಬರೂ 25 ನಕಲಿ ಕಂಪನಿಗಳನ್ನು ಸ್ಥಾಪಿಸಿದ್ದರು. ಸ್ವಿಟ್ಜರ್ಲೆಂಡ್‌ನಲ್ಲಿ ‘ವೆಸ್ಟರ್ನ್‌ ಅಡ್ವೈಸರಿ ಗ್ರೂಪ್‌’ ಎಂಬ ಕಂಪನಿಯನ್ನು ಅಲಿ ನಡೆಸುತ್ತಿದ್ದರು. ಈ ಕಂಪನಿಯು ಬ್ರೋಕರೇಜ್‌ ಶುಲ್ಕಕ್ಕೆ ಬದಲಾಗಿ ಇತರ ಕಂಪನಿಗಳಿಗೆ ಸಾಲ ನೀಡುವ ಭರವಸೆ ನೀಡುತ್ತಿತ್ತು. ₹300 ಕೋಟಿ ವಂಚನೆಯ ಬಳಿಕ ಸ್ವಿಟ್ಜರ್ಲೆಂಡ್‌ನಿಂದ ಪರಾರಿಯಾಗಿದ್ದ ಅಲಿಯನ್ನು 2022ರಲ್ಲಿ ಲಂಡನ್‌ನಲ್ಲಿ ಬಂಧಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.