ADVERTISEMENT

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ವಿರುದ್ಧ ಅರ್ಜಿ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2019, 18:54 IST
Last Updated 2 ಮಾರ್ಚ್ 2019, 18:54 IST
   

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಗಳನ್ನು ಪರೀಕ್ಷಿಸಲು ನಿರ್ದಿಷ್ಟ ಮಾರ್ಗಸೂಚಿಗಳನ್ನು ರೂಪಿಸುವಂತೆ ಕೇಂದ್ರಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಕೋರಿ ವಕೀಲರೊಬ್ಬರು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಭಾರತ–ಪಾಕಿಸ್ತಾನ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದಂತೆ ತಪ್ಪು ಮಾಹಿತಿಯುಳ್ಳ ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಅಲ್ಲದೆ, ನಾಗರಿಕರಲ್ಲಿ ಇವು ಸಮೂಹ ಸನ್ನಿ ಸೃಷ್ಟಿಸುತ್ತಿದ್ದು ಗುಂಪು ಗಲಭೆಯಂತಹ ಘಟನೆಗೂ ಕಾರಣವಾಗುತ್ತಿವೆ. ಈ ನಿಟ್ಟಿನಲ್ಲಿ ಸೂಕ್ತ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ಅರ್ಜಿದಾರರಾದ ಅನುಜಾ ಕಪೂರ್‌ ಮನವಿ ಮಾಡಿದ್ದಾರೆ.

‘ಭಾರತವು ಪಾಕಿಸ್ತಾನದ ವಿರುದ್ಧ ವೈಮಾನಿಕ ದಾಳಿ ನಡೆಸಿದ ನಂತರ, ಸಾಮಾಜಿಕ ಜಾಲತಾಣಗಳ ಬಳಕೆದಾರರ ನಡುವೆ ವಾಗ್ಯುದ್ಧವೇ ನಡೆಯಿತು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವ ಸುದ್ದಿಗಳ ವಿಶ್ವಾಸಾರ್ಹತೆ ಪರೀಕ್ಷಿಸುವ ಕೆಲಸವಾಗಬೇಕು’ ಎಂದು ಅವರು ಕೋರಿದ್ದಾರೆ.

ADVERTISEMENT

ಸುಳ್ಳು ಸುದ್ದಿಗಳನ್ನು ನಿರ್ಬಂಧಿಸುವಂತಹ ಯಾವುದೇ ಕಾನೂನು ಇಲ್ಲ. ಹೀಗಾಗಿ, ಇಂತಹ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮಿಂಚಿನ ವೇಗದಲ್ಲಿ ಹರಿದಾಡುತ್ತಿವೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.