ADVERTISEMENT

ಅರ್ಚಕನ ಸಜೀವ ದಹನ: ಬೇಡಿಕೆ ಈಡೇರಿದ ನಂತರವೇ ಅಂತ್ಯಸಂಸ್ಕಾರ ಎಂದ ಸಂಬಂಧಿಕರು

ಏಜೆನ್ಸೀಸ್
Published 10 ಅಕ್ಟೋಬರ್ 2020, 14:42 IST
Last Updated 10 ಅಕ್ಟೋಬರ್ 2020, 14:42 IST
ರಾಜಸ್ಥಾನದ ಅರ್ಚಕನ ಸಂಬಂಧಿಕರು
ರಾಜಸ್ಥಾನದ ಅರ್ಚಕನ ಸಂಬಂಧಿಕರು   

ಕರೌಲಿ:ರಾಜಸ್ಥಾನದ ಹಳ್ಳಿಯೊಂದರಲ್ಲಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಸಜೀವವಾಗಿ ಸುಟ್ಟ ಬಳಿಕ ಗಂಭೀರ ಗಾಯಗಳಿಂದ ಮೃತಪಟ್ಟಿದ್ದ ಅರ್ಚಕನ ಕುಟುಂಬ ಸದಸ್ಯರು, ರಾಜ್ಯ ಸರ್ಕಾರವು ತಮ್ಮೆಲ್ಲ ಬೇಡಿಕೆಗಳನ್ನು ಈಡೇರಿಸುವವರೆಗೆ ಅರ್ಚಕನ ಅಂತ್ಯ ಸಂಸ್ಕಾರ ಮಾಡಲು ನಿರಾಕರಿಸಿದ್ದಾರೆ.

'ನಮ್ಮ ಬೇಡಿಕೆಗಳು ಈಡೇರುವವರೆಗೂ ನಾವು ಮೃತದೇಹದ ಅಂತ್ಯಸಂಸ್ಕಾರವನ್ನು ನಡೆಸುವುದಿಲ್ಲ. ನಮಗೆ ₹ 50 ಲಕ್ಷ ಪರಿಹಾರ ಮತ್ತು ಸರ್ಕಾರಿ ಕೆಲಸ ನೀಡಬೇಕು. ಎಲ್ಲ ಆರೋಪಿಗಳನ್ನು ಬಂಧಿಸಬೇಕು ಹಾಗೂ ಪಟ್ವಾರಿ (ಕಂದಾಯ ಅಧಿಕಾರಿ) ಮತ್ತು ಆರೋಪಿಗಳನ್ನು ಬೆಂಬಲಿಸುತ್ತಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು. ನಮಗೆ ರಕ್ಷಣೆ ಬೇಕು' ಎಂದು ದಲಿತ ಅರ್ಚಕನ ಸಂಬಂಧಿಯೊಬ್ಬರು ತಿಳಿಸಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಈ ಮಧ್ಯೆ, ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಓಂ ಪ್ರಕಾಶ್ ಮೀನಾ ಅವರು ಬಾಬುಲಾಲ್ ಅವರ ಗ್ರಾಮಕ್ಕೆ ಭೇಟಿ ನೀಡಿ ಮೃತದೇಹದ ಅಂತ್ಯ ಸಂಸ್ಕಾರ ನಡೆಸುವಂತೆ ಕುಟುಂಬದವರನ್ನು ಮನವಿ ಮಾಡಿದ್ದಾರೆ.

ADVERTISEMENT

'ಅರ್ಚಕನ ಅಂತಿಮ ವಿಧಿ ವಿಧಾನಗಳಲ್ಲಿ ಪಾಲ್ಗೊಳ್ಳಲು ಜನರು ಜಮಾಯಿಸಿದ್ದಾರೆ. ಆದರೆ ಕುಟುಂಬಸ್ಥರು ಸ್ಥಳೀಯ ಆಢಳಿತ ಮತ್ತು ಸರ್ಕಾರದ ಮುಂದೆ ಕೆಲವು ಬೇಡಿಕೆಗಳನ್ನು ಇಟ್ಟಿದ್ದಾರೆ. ಅರ್ಚಕನು ಕೊನೆಯುಸಿರೆಳೆದು ಎರಡು ದಿನ ಕಳೆದಿರುವುದರಿಂದಾಗಿ ಅಂತ್ಯ ಸಂಸ್ಕಾರ ನೆರವೇರಿಸುವಂತೆ ಅವರ ಕುಟುಂಬಸ್ಥರಿಗೆ ಮನವಿ ಮಾಡುತ್ತಿದ್ದೇವೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರೌಲಿ ಜಿಲ್ಲೆಯ ಸಪೋತ್ರಾದ ಬುಕ್ನಾ ಗ್ರಾಮದಲ್ಲಿ ದೇವಾಲಯದ ಭೂಮಿಯನ್ನು ಅತಿಕ್ರಮಣ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕಾಗಿ ದೇವಾಲಯದ ಅರ್ಚಕನ ಮೇಲೆ ಪೆಟ್ರೋಲ್ ಸುರಿದು ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ರಾತ್ರಿ ಅರ್ಚಕನು ಮೃತಪಟ್ಟಿದ್ದರು.

ಪ್ರಕರಣ ಸಂಬಂಧ ಪೊಲೀಸರು ಪ್ರಮುಖ ಆರೋಪಿ ಕೈಲಾಶ್ ಮೀನಾ ಎಂಬಾತನನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.